ಸುದ್ದಿ ಸಂಗ್ರಹ ಕಲಬುರಗಿ
ನಗರದ ಹೊರವಲಯದ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅಧೀಕ್ಷಕ ರಾಕೇಶ ಕಾಂಬಳೆ ಸೇರಿದಂತೆ ಎಂಟು ಅಧಿಕಾರಿ, ಸಿಬ್ಬಂದಿಯನ್ನು ಕಾರಾಗೃಹಗಳ ಇಲಾಖೆ ಅಮಾನತುಗೊಳಿಸಿದೆ.
ಜೈಲು ಅಧೀಕ್ಷಕ ರಾಕೇಶ ಕಾಂಬಳೆ ಜೊತೆಗೆ ಸಹಾಯಕ ಜೈಲು ಅಧೀಕ್ಷಕ ಸುರೇಶ ಬಿ. ಜೈಲರ್ ಶ್ರೀಮಂತಗೌಡ ಪಾಟೀಲ, ಹೆಡ್ ವಾರ್ಡರ್‌ಗಳಾದ ನಿಂಗಣ್ಣ ಬಂದರಬಟ್ಟಿ ಮತ್ತು ಯಮನಪ್ಪ ಕುರುಬರ, ವಾರ್ಡರ್‌ಗಳಾದ ಬಸವರಾಜ ಮೇತ್ರಿ, ಸಾವಿತ್ರಿ ತಳಕೇರಿ, ಅಜಿಮ್ ಎನ್.ಎಸ್. ಅಮಾನತುಗೊಂಡಿದ್ದಾರೆ. ಬೆಂಗಳೂರು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಕುಮಾರ ಅವರನ್ನು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಲಾಗಿದೆ.
ಜುಲೈ 14ರಂದು ಬೆಳಿಗ್ಗೆ 4.35ರ ಸುಮಾರಿಗೆ ಇಬ್ಬರು ಪೋಕ್ಸೊ ಹಾಗೂ ಕೊಲೆ ಪ್ರಕರಣದ ಒಬ್ಬ ಕೈದಿ ಜೈಲಿನಿಂದ ಪರಾರಿಯಾ ಗಿದ್ದರು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಲ್ಲೆ ಈ ಘಟನೆ ನಡೆದಿದ್ದಕ್ಕೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿತ್ತು.
ಈ ಪ್ರಕರಣವನ್ನು ಕಾರಾಗೃಹಗಳ ಇಲಾಖೆ ಗಂಭೀರವಾಗಿ ಪರಿಗಣಿಸಿತ್ತು. ಜೈಲು ಅಧಿಕಾರಿಗಳು–ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಡಿಐಜಿ ಸೋಮಶೇಖರ ಅವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದರು. ಅದರಂತೆ ಅಧಿಕಾರಿಗಳು, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಕೈದಿ ಕಾಲಿಗೆ ಗುಂಡೇಟು: ಜೈಲಿನಿಂದ ಪರಾರಿಯಾಗಿದ್ದ ಮೂವರ ಪೈಕಿ ಒಬ್ಬ ಕೈದಿಯ ಕಾಲಿಗೆ ಬುಧವಾರ ನಸುಕಿನಲ್ಲಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಸಂತೋಷ್ ಮೇತ್ರೆ ಎಂಬ ಕೈದಿ ಕಲಬುರಗಿಯ ಹುಮನಾಬಾದ್ ರಸ್ತೆಯ ಕಪನೂರ ಕೈಗಾರಿಕಾ ಪ್ರದೇಶದಲ್ಲಿರುವ ಮಾಹಿತಿ ಸಿಕ್ಕಿತ್ತು. ಆತನನ್ನು ಬಂಧಿಸಲು ಹೋದಾಗ ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಕೈದಿ ಶರಣಾಗದ ಕಾರಣ ಪೊಲೀಸರು ಆತನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಬೇಲಿಯಲ್ಲಿ ವಿದ್ಯುತ್ ಇರಲಿಲ್ಲ: ಕೇಂದ್ರ ಕಾರಾಗೃಹದಿಂದ ಕೈದಿಗಳು ಪರಾರಿಯಾದ ಭಾಗದ ಕಾಂಪೌಂಡ್‌ನ ವಿದ್ಯುತ್ ತಂತಿ ಬೇಲಿಯಲ್ಲಿ ವಿದ್ಯುತ್ ಪ್ರವಹಿಸುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ಅದುವೇ ಕೈದಿಗಳು ಸುಲಭವಾಗಿ ಪರಾರಿಯಾಗಲು ನೆರವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಕೈದಿಗಳ ಪರಾರಿ ಪ್ರಕರಣವನ್ನು ಕಾರಾಗೃಹಗಳ ಇಲಾಖೆ ಗಂಭೀರವಾಗಿ ಪರಿಗಣಿಸಿತ್ತು. ಬೆಂಗಳೂರಿನ ಮುಖ್ಯ ಕಚೇರಿಯ ಡಿಐಜಿ ಜಿನೇಂದ್ರ ಖನಗಾವಿ ಹಾಗೂ ಬೆಳಗಾವಿ ಉತ್ತರ ವಲಯದ ಡಿಐಜಿ ಕೆ.ಸೋಮಶೇಖರ ಖುದ್ದು ಕಲಬುರಗಿ ಜೈಲಿಗೆ ಧಾವಿಸಿ, ಪರಿಸ್ಥಿತಿ ಅವಲೋಕಿಸಿದ್ದರು. ಮಂಗಳವಾರ ರಾತ್ರಿ 9.30ರ ತನಕ ಸಭೆ ನಡೆಸಿ ಮಾಹಿತಿ ಕಲೆ ಹಾಕಿದ್ದರು.
ಡಿಐಜಿ ಜಿನೇಂದ್ರ ಖನಗಾವಿ ಅವರು ಬುಧವಾರವೂ ಜೈಲು ಅಧಿಕಾರಿಗಳ ಸಭೆ ನಡೆಸಿದರು. ಜೈಲಿನ ಭದ್ರತೆ, ರಾತ್ರಿ ಪಾಳಿ ಸಿಬ್ಬಂದಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ಹಲವು ಖಡಕ್ ಸೂಚನೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಸಿಟಿವಿಯಲ್ಲಿ ಸೆರೆ: ಕೈದಿಗಳು ಪರಾರಿಯಾದ ಕೃತ್ಯ ಜೈಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಕೈದಿಗಳು ಜೈಲಿನ ಕಾಂಪೌಂಡ್‌ನಿಂದ ಜಿಗಿದು ಎಲ್ಲರೂ ಒಂದೇ ಮಾರ್ಗದಲ್ಲಿ ರಾಜಾರೋಷವಾಗಿ ಹೋಗುತ್ತಿರುವ ದೃಶ್ಯ ವಿಡಿಯೊದಲ್ಲಿದೆ.