ಪಿಚ್ಚರ್ ಅಭಿ ಬಾಕಿ ಹೈ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಆರ್‌ಎಸ್‌ಎಸ್‌ಗೆ ಬರೆದ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ. ಬರಲಿ ಬಿಡಿ ಅವಸರವೇಕೆ ? ಪಿಚ್ಚರ್ ಅಭಿ ಬಾಕಿ ಹೈ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಲವಾರು ಪ್ರಶ್ನೆಗಳನ್ನು ಹಾಕಿ ಆರ್‌ಎಸ್‌ಎಸ್‌ಗೆ ಪತ್ರ ಬರೆದಿದ್ದೆನೆ. ಇನ್ನೂ ಉತ್ತರ ನೀಡಿಲ್ಲ. ನೀಡಲಿ ಬಿಡಿ ಅವಸರವೇಕೆ, ಅಭೀ ಪಿಚ್ಚರ್ ಬಾಕಿ ಹೈ ಅವರೂ ಕೂಡಾ ನನ್ನ ಹಾಗೂ ಕುಟುಂಬದ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ, ಹಾಕಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ನಡೆಸಬೇಕಿದ್ದರೆ ಕಡ್ಡಾಯಾಗಿ ಅನುಮತಿ ಪಡೆದುಕೊಳ್ಳಲೆಬೇಕೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ನಾನು ಗೃಹ ಸಚಿವನಾಗಿರುವವರೆಗೆ ಕಡ್ಡಾಯ. ಆರ್‌ಎಸ್‌ಎಸ್‌ ನವರು ಇದುವರೆಗೆ ಮಾಹಿತಿ ಮಾತ್ರ ನೀಡುತ್ತಿದ್ದರು. ಚಿತ್ತಾಪುರ ದಲ್ಲಿಯೂ ಹಾಗೆ ಮಾಡಿದರು. ಅನುಮತಿ ಕೊಡಲಿಲ್ಲ ಎಂದು ಕೋರ್ಟ್’ಗೆ ಹೋಗಿದ್ದರು. ಕೋರ್ಟ್ ನಿರ್ದೇಶನದಂತೆ ಅರ್ಜಿ ಸಲ್ಲಿಸಿದರು. ಇನ್ನು ಮುಂದೆಯೂ ಕೂಡಾ ಅವರು ಅರ್ಜಿಸಲ್ಲಿಸಿದರೆ, ಕೋರ್ಟ್ ನಿರ್ದೇಶನ ಹಾಗೂ ಸರ್ಕಾರದ ಮಾನದಂಡ, ಸ್ಥಳ, ಸಮಯ ಮತ್ತು ಸಂದರ್ಭಕ್ಕನುಗುಣವಾಗಿ ಮುಂದಿನ ಕ್ರಮವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಆರ್‌ಎಸ್‌ಎಸ್‌ ಗುರುದಕ್ಷಿಣೆ ತೆಗೆದುಕೊಳ್ಳುತ್ತಾರಂತೆ. ಗುರು ಎಂದರೆ‌ ಯಾರು ? ಧ್ವಜ ತಾನೆ ? ಧ್ವಜದ ಮೇಲೆ ಗುರುದಕ್ಷಿಣೆ ತೆಗೆದುಕೊಂಡರೆ, ಅದಕ್ಕೆ ಲೆಕ್ಕ ತೋರಿಸಲಿ ಎಂದು ಸವಾಲಾಖಿದರು.

ಶ್ರೀರಾಮನ‌ ಹುಂಡಿ ಕಳ್ಳತನ ವಿಚಾರ ಪ್ರಸ್ತಾಪಿಸಿದ ಗೃಹ ಸಚಿವರು, ಬೆಳ್ಳಿ, ಚಿನ್ನ, ಆಭರಣ, ಹಣ ಸೇರಿದಂತೆ ಇಟ್ಟಿಗೆಗಳನ್ನು ಕೂಡಾ ಕಳವು ಮಾಡಿದ್ದಾರೆ. ಕರ್ನಾಟಕದ ಗಣೇಶ್ ಎನ್ನುವುವರು ಕಟ್ಟಡ‌ ನಿರ್ಮಾಣ ಗುತ್ತಿಗೆ ಪಡೆದುಕೊಂಡಿದ್ದಾರಂತೆ, ಇಲ್ಲಿಂದ ಹೋಗಿ‌ ಅಲ್ಲಿ ಕಮಿಷನ್ ಹೊಡೆದಿದ್ದಾರಂತೆ. ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾನದ ವಿಚಾರದಲ್ಲಿ‌ ಕೆಲವರು ವಿರೋಧ ಮಾಡಿದ್ದರು. ಆದರೂ ಮೋದಿ ತರಾತುರಿಯಲ್ಲಿ ಮಾಡಿದ್ದರು. ಚೆಂದಾ ಚೋರಿಯಲ್ಲಿ ಆರ್‌ಎಸ್‌ಎಸ್‌ಗೂ ಪಾಲು ಹೋಗಿದ್ದರೆ ನನಗೆ ಅನುಮಾನವಿಲ್ಲ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ವಿಫಲವಾಗಿದೆ ಎಂದು ಟೀಕಿಸಿದ ಸಚಿವರು ಮೋದಿ‌ ವಿದೇಶಾಂಗ ನೀತಿ ಇನಸ್ಟಾ‌ದಲ್ಲಿ ರೀಲ್ ಮಾಡಲು ಹಾಗೂ ಚಾಕೋಲೇಟ್ ವಿತರಣೆ ಮಾಡಲು ಮಾತ್ರ ಸೀಮಿತವಾಗಿದೆ. ಕಚ್ಚಾ ತೈಲ ಬೆಲೆ ಕಡಿಮೆಯಾಗಿದೆಯಲ್ಲ ಈಗೇಕೆ ಪೆಟ್ರೋಲಿಯಂ ಬೆಲೆ ಯಾಕೆ ಕಡಿಮೆ ಮಾಡುತ್ತಿಲ್ಲ ? ಎಂದು ಪ್ರಶ್ನಿಸಿದರು.

ರಾಜ್ಯ ಮಂತ್ರಿಮಂಡಲದಲ್ಲಿ ನಮ್ಮ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇದ್ದೆ ಇರುತ್ತದೆ. ನಮ್ಮ ಭಾಗದಿಂದ ಯಾರೆ ಸಚಿವರಾದರೂ ಕೂಡಾ ಹೆಚ್ಚಿನ ಅಭಿವೃದ್ದಿಗೆ ಸಹಕಾರಿಯಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಆರ್ಟಿಕಲ್ 371ಜೆ ಅಡಿಯಲ್ಲಿ ಗ್ರೇಡ್- 2 ತಹಸೀಲ್ದಾರ್’ಗಳ ಪದೋನ್ನತಿ ವಿಚಾರ, ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು. ಕಲಬುರಗಿ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವಾಟರ್ ಮೆನ್, ಬಿಲ್ ಕಲೆಕ್ಟರ್’ಗಳ ಖಾಯಮಾತಿ ವಿಚಾರದಲ್ಲಿಯೂ ಕೂಡಾ ಆರ್ಥಿಕ‌ ಇಲಾಖೆಯೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮವಹಿಸಲಾಗುವುದು ಎಂದರು.

ಡಬರಾಬಾದ್ ಬಳಿಯ ರೇಷ್ಮೆ ಇಲಾಖೆಯ‌ಕಟ್ಟಡದ ಕಳಪೆ ಕಾಮಗಾರಿ ವಿಚಾರ ಪ್ರಸ್ತಾಪಿಸದ್ದಕ್ಕೆ ಉತ್ತರಿಸಿದ ಸಚಿವರು ಮುಂದಿನ ವಾರ ಭೇಟಿ ನೀಡುತ್ತೇನೆ, ಕಳಪೆ ಆಗಿದ್ದರೆ ಕ್ರಮವಹಿಸಲಾಗುವುದು ಎಂದರು.

ದೀರ್ಘಾವಧಿ ಕಾಲ ಒಂದೆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಂಧಿಖಾನೆ ಇಲಾಖೆ ಹಾಗೂ ಗೃಹ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ತರ್ಕಬದ್ದ ನಿಯಮಾವಳಿ ಮೂಲಕ ಕ್ರಮ ವಹಿಸಲಾಗುವುದು. ಒಂದು ವೇಳೆ, ವರ್ಗಾವಣೆ ಮಾಡಿದರೆ, ಸಿಬ್ಬಂದಿಗಳು ಕೋರ್ಟ್’ಗೆ ಹೋಗುವ ಸಾಧ್ಯತೆ ಇರುವುದರಿಂದ‌ ಕಾನೂನಿನ ಪ್ರಕಾರ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಲೋಕಾಯುಕ್ತ ಸಂಸ್ಥೆ ಸೇರಿದಂತೆ ಯಾವುದೆ ಸಂಸ್ಥೆಗಳು ಒಳ್ಳೆಯ ಸಲಹೆ ನೀಡಿದರೆ ಸ್ವೀಕರಿಸಲಾಗುವುದು ಎಂದ ಸಚಿವರು ನೂತನ ಪೊಲೀಸ್ ಠಾಣೆಗಳ ಸ್ಥಾಪನೆಗೆ ಕೇಂದ್ರದ ನಿಮಯಮಾವಳಿ ಪಾಲನೆ ಮಾಡಬೇಕಿರುತ್ತದೆ. ಯಾವುದೆ ಹೊಸ ಠಾಣೆ ಸ್ಥಾಪನೆಗೆ ಆಯಾ ಪ್ರದೇಶದ ಕ್ರೈಮ್ ಪರಿಗಣನೆಗೆ ಬರುತ್ತದೆ ಹೊರತು ವ್ಯಾಪ್ತಿ ಪ್ರದೇಶವಲ್ಲ. ಇದೆ ನಿಯಮಾವಳಿ ಪ್ರಕಾರ ಕಲಬುರಗಿ ಕಮಿಷನರೇಟ್ ಅಡಿಯಲ್ಲಿಯೂ ನೂತನ ಠಾಣೆ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದರು.‌

ಬೆಂಗಳೂರಿನ ಕಲ್ಲು ಕ್ವಾರಿಯಂತೆ ಮಿರಿಯಾಣದಲ್ಲಿಯೂ ನಡೆಯುತ್ತಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕಲ್ಲು ಕ್ವಾರಿಗಳ ನಿರ್ವಹಣೆ, ಕ್ರಮಬದ್ದತೆ ಹಾಗೂ ಅಕ್ರಮ ತಡೆ ವಿಚಾರ ಗಣಿ ಮತ್ತು ಭೂ ವಿಜ್ಞಾನ‌ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೂ ನಮ್ಮ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ಪ್ರವೀಣ್ ಹರವಾಳ, ಸುಭಾಷ್ ರಾಠೋಡ, ರಾಜಗೋಪಾಲ ಮುದಿರೆಡ್ಡಿ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *