ಸುದ್ದಿ ಸಂಗ್ರಹ ಕಲಬುರಗಿ
ರಾಸಾಯನಿಯುಕ್ತ ಪಾನೀಯಗಳು, ಜಂಕ್ ಫುಡ್‌ಗಳ ಸೇವನೆ ಬೇಡ. ದೈಹಿಕ ವ್ಯಾಯಾಮ ಅಗತ್ಯ. ಸಮತೋಲಿತ ಆಹಾರ ಸೇವನೆ, ಯೋಗ, ಧ್ಯಾನ ಮಾಡುವುದು, ಧನಾತ್ಮಕ ಚಿಂತನೆ ಅಂತಹ ಶಿಸ್ತುಬದ್ಧ ಜೀವನಶೈಲಿ ಅಳವಡಿಸಿಕೊಂಡರೆ ಆರೋಗ್ಯವಾಗಿರಲು ಸಾಧ್ಯ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.
ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ ಸಾರ್ವತ್ರಿಕ ಆರೋಗ್ಯ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನಾರೋಗ್ಯಕರ ಜೀವನಶೈಲಿಯಿಂದ ಅನೇಕ ಕಾಯಿಲೆಗಳು ಬರುತ್ತಿವೆ. ಮದ್ಯಪಾನ, ಧೂಮಪಾನ ಸೇವೆನೆ ಅಂತಹ ಹಾನಿಕಾರಕ ವಸ್ತುಗಳಿಂದ ದೂರವಿರಬೇಕು. ಜೀವನ ವಿಧಾನದಲ್ಲಿ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಯಿರಬೇಕು ಎಂದರು.
ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಯುವಕರು ದೇಶದ ಅಮೂಲ್ಯ ಸಂಪತ್ತು. ಯುವಶಕ್ತಿ ದುಶ್ಚಟಗಳಿಗೆ ಬಲಿಯಾಗದೆ, ಸದೃಢ ಆರೋಗ್ಯ ಕಾಪಾಡಿಕೊಂಡು ಉನ್ನತ ಸಾಧನೆ ಮಾಡುವ ಮೂಲಕ ದೇಶಕ್ಕೆ ದೊಡ್ಡ ಆಸ್ತಿಯಾಗಬೇಕು. ಆರೋಗ್ಯವೇ ದೊಡ್ಡ ಸಂಪತ್ತಾಗಿದೆ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕಾದದ್ದು ತುಂಬಾ ಅಗತ್ಯ. ಆದ್ದರಿಂದ ಆರೋಗ್ಯಕರ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪುರೆ, ರೇಶ್ಮಾ ನಕ್ಕುಂದಿ, ಲಕ್ಷ್ಮಿ ಮೈಲಾರಿ, ಅರ್ಚನಾ, ಅನೀತಾ ಕಣಸೂರ, ನಾಗೇಶ್ವರಿ ಮುಗಳಿವಾಡಿ, ಚಂದಮ್ಮ ಮರಾಠ, ಜಗನಾಥ ಗುತ್ತೇದಾರ, ಆಶಾ ಕಾರ್ಯಕರ್ತೆಯರಾದ ಸುನಿತಾ, ಸಂಗೀತಾ, ವಿಜುಬಾಯಿ, ಸೇವಕಿ ನಾಗಮ್ಮ ಚಿಂಚೋಳಿ ಸೇರಿದಂತೆ ಅನೇಕರು ಇದ್ದರು.