ಸುದ್ದಿ ಸಂಗ್ರಹ ಕಲಬುರಗಿ
ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ-2026ರ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 2002ರ ಎಸ್‌ಐಆರ್ ಪಟ್ಟಿಯ ಮಾಹಿತಿ ನೀಡದ ಮತ್ತು ಈ ಪಟ್ಟಿಗೆ ದಾಖಲೆಗೆ ತಾಳೆಯಾಗದ 1,05,493 ಮತದಾರರಿಗೆ ಮತದಾರರ ನೋಂದಣಾಧಿಕಾರಿ/ ಸಹಾಯಕ ಮತದಾರರ ನೋಂದಣಾಧಿಕಾರಿ ಸಮಕ್ಷಮ ವಿಚಾರಣೆಗೆ ಹಾಜರಾಗಲು ನೋಟಿಸ್ ಜನರೇಟ್ ಮಾಡಲಾಗಿದೆ. ಇದರಲ್ಲಿ ಈಗಾಗಲೇ 59,389 ಮತದಾರರಿಗೆ ನೋಟಿಸ್ ತಲುಪಿಸಿದ್ದು, 46,111 ಜನರಿಗೆ ನೋಟಿಸ್ ನೀಡಬೇಕಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಕಳೆದ ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 18,49,585 ಜನ ಮತದಾರರಿದ್ದು, ಇದರಲ್ಲಿ 2002ರ ಎಸ್‌ಐಆರ್ ಪಟ್ಟಿಯ ಮಾಹಿತಿ ನೀಡದ 53,788 ಮತದಾರರನ್ನು ನೋ ಮ್ಯಾಪಿಂಗ್ ಮತ್ತು 2002ರ ಎಸ್‌ಐಆರ್ ಪಟ್ಟಿಯ ದಾಖಲೆಗೆ ತಾಳೆಯಾಗದ 51,705 ಮತದಾರರನ್ನು ಅನೋಮಲೀಸ್ ಎಂದು ಪರಿಗಣಿಸಲಾಗಿದೆ. ಇಂತಹ ಮತದಾರರಿಗೆ ಕಳೆದ ಸೆ.5ರಿಂದ ವಿಚಾರಣೆ ಆರಂಭವಾಗಿದ್ದು, ಅಕ್ಟೋಬರ್ 12 ಕೊನೆಯ ವಿಚಾರಣೆ ದಿನವಾಗಿರುತ್ತದೆ ಎಂದಿದ್ದಾರೆ.
ವಿಧಾನಸಭಾ ಕ್ಷೇತವಾರು ಅಫಜಪುರದಲ್ಲಿ 6,179, ಜೇವರ್ಗಿ 5,005, ಚಿತ್ತಾಪುರ 1,887, ಸೇಡಂ 3,516, ಚಿಂಚೋಳಿ 3,625, ಕಲಬುರಗಿ ಗ್ರಾಮೀಣ 6,400, ಕಲಬುರಗಿ ದಕ್ಷಿಣ 13,816, ಕಲಬುರಗಿ ಉತ್ತರ 14,070 ಮತ್ತು ಆಳಂದದಲ್ಲಿ 4,891 ಮತದಾರರಿಗೆ ನೋಟಿಸ್ ನೀಡಲಾಗಿದೆ. ತ್ವರಿತ ವಿಚಾರಣೆ ನಡೆಸಿ ವಿಲೇವಾರಿಗೆ ಈಗಿರುವ 9 ಜನ ಎಇಆರ್‌ಒಗಳ ಜೊತೆಗೆ ಹೆಚ್ಚುವರಿಯಾಗಿ 67 ಜನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಡಿ.ಸಿ ತಿಳಿಸಿದ್ದಾರೆ.
ಎಸ್‌ಐಆರ್‌ನಲ್ಲಿ ಮತಗಟ್ಟೆಗಳ ತರ್ಕಬದ್ದಿಕರಣದ ನಂತರ 61 ಹೊಸ ಮತಗಟ್ಟೆ ರಚನೆಯಾಗಿದ್ದು, ಇದಕ್ಕಾಗಿ 61 ಬಿಎಲ್‌ಒಗಳನ್ನು ಸಹ ನೇಮಕ ಮಾಡಲಾಗಿದೆ. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಲು ಬಯಸುವವರಿಗೆ ಸೆ.19 ಮತ್ತು 20ರಂದು ಜಿಲ್ಲೆಯಾದ್ಯಂತ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೆಸರು ಸೇರ್ಪಡೆಗೆ ನಮೂನೆ 6 ಸಲ್ಲಿಸಿ: ಕರಡು ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಹೊರಗುಳಿದಲ್ಲಿ ನಮೂನೆ-6 ಭರ್ತಿ ಮಾಡಿ ಅಥವಾ ಆನ್‍ಲೈನ್ ಮೂಲಕ ಅಗತ್ಯ ದಾಖಲಾತಿಯೊಂದಿಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರಲು ಈಗಲೂ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಪ್ರಕ್ರಿಯೆ ನಿರಂತರವಾಗಿರಲಿದೆ. ಸ್ವೀಕೃತ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಪಟ್ಟಿಯಲ್ಲಿ ಸೇರಿಸಲು ಕ್ರಮ ವಹಿಸಲಾಗುತ್ತದೆ. ಸೆಪ್ಟೆಂಬರ್ 23ರೊಳಗೆ ಅರ್ಜಿ ಸಲ್ಲಿಸಿದಲ್ಲಿ ಅಕ್ಟೋಬರ್ 27ರಂದು ಪ್ರಕಟಿಸಲಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.