ದಂಡೋತಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬಿಜೆಪಿ ತಂಡ ಭೇಟಿ, ಮಾಹಿತಿ ಸಂಗ್ರಹ

ತಾಲೂಕು

ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕಿನ ದಂಡೋತಿ ಗ್ರಾಮದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜು.9ರಂದು ರಾತ್ರಿ ಊಟ ಮಾಡಿದ 50 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಬಿಜೆಪಿ ತಂಡ ಬುಧವಾರ ವಸತಿ ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ ನೇತೃತ್ವದಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ, ಬಿ.ಜಿ ಪಾಟೀಲ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ, ಬಾಬುರಾವ ಚವ್ಹಾಣ ಅವರನ್ನೊಳಗೊಂಡ ತಂಡವು ವಸತಿ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಮತ್ತು ಶಾಲೆಯ ಶಿಕ್ಷಕರನ್ನು ಮಾತನಾಡಿಸಿ, ಘಟನೆಯ ಬಗ್ಗೆ ಮತ್ತು ಶಾಲೆಯ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿ, ಘಟನೆಯಿಂದ ವಿದ್ಯಾರ್ಥಿಗಳಲ್ಲಿ ಭಯ ಉಂಟಾಗಿದೆ. ಮಕ್ಕಳನ್ನು ವಸತಿ ಶಾಲೆಯಲ್ಲಿ ಬಿಡಲು ಪಾಲಕರು ಆತಂಕ ಪಡುತ್ತಿದ್ದಾರೆ. 50 ವಿದ್ಯಾರ್ಥಿಗಳಿದ್ದರೂ ಎರಡು ಲೀಟರ್ ಹಾಲಿನಲ್ಲೆ ಚಹಾ, ಸಾಂಬಾರ್ ಮಾಡಲು ಒಂದು ಕೆಜಿ ಬೇಳೆಕಾಳು, ಹತ್ತು ಕೆಜಿ ತರಕಾರಿ ಮಾತ್ರ ಬಳಸುತ್ತಾರೆ. ಕಳಪೆ ಗುಣಮಟ್ಟದ ಆಹಾರದಿಂದಾಗಿ ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ’ ಎಂದು ಆರೋಪಿಸಿದರು.

ವಸತಿ ಶಾಲೆಯಲ್ಲಿನ ಅವ್ಯವಸ್ಥೆಯಿಂದಾಗಿ ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಾಲೆಯಲ್ಲಿ ಕನ್ನಡ ಶಿಕ್ಷಕರು ಇಲ್ಲ. ಸೇವೆಯಿಂದ ಅಮಾನತ್ತುಗೊಂಡಿರುವ ಶಿಕ್ಷಕರ ಸ್ಥಾನಕ್ಕೆ ಶೀಘ್ರದಲ್ಲಿ ಬೇರೆ ಶಿಕ್ಷಕರ ನಿಯೋಜನೆ ಮಾಡಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು. ಆಹಾರ ಧಾನ್ಯ ಸರಬರಾಜು ಮಾಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ತಾಲೂಕು ಬಿಜೆಪಿ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಮಾಲಗತ್ತಿ, ಮುಖಂಡರಾದ ಸುರೇಶ ರಾಠೋಡ, ಧರ್ಮಣ್ಣ ಇಟಗಾ, ಮಲ್ಲಿಕಾರ್ಜುನ ಎಮ್ಮೆನೋರ್, ಶರಣಪ್ಪ ತಳವಾರ, ಗುಂಡು ಮತ್ತಿಮಡು, ವೀರಣ್ಣ ಯಾರಿ ಮತ್ತು ಶರಣು ತೊಟ್ನಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *