ಸುದ್ದಿ ಸಂಗ್ರಹ ಕಲಬುರಗಿ
6 ರಿಂದ 8ನೇ ತರಗತಿಯ ಪದವೀಧರ ಶಾಲಾ ಶಿಕ್ಷಕರ (ಜಿಪಿಎಸ್‌ಟಿಆರ್) ನೇಮಕಾತಿಗೆ ಸಂಬಂಧಿಸಿದಂತೆ 2023ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ತಾತ್ಕಾಲಿಕ ಮತ್ತು ಅಂತಿಮ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠವು ಮಹತ್ವದ ಆದೇಶ ನೀಡಿದೆ.
ರಾಜ್ಯ ಸರ್ಕಾರವು 15 ಸಾವಿರ ಜಿಪಿಎಸ್‌ಟಿಆರ್ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ ಸಂವಿಧಾನದ 371(ಜೆ) ಕಲಂ ತಿದ್ದುಪಡಿಯ ಅನ್ವಯ ಕಲ್ಯಾಣ ಕರ್ನಾಟಕ (ಎಚ್‌ಕೆ) ಮತ್ತು ಕಲ್ಯಾಣ ಕರ್ನಾಟಕೇತರ (ನಾನ್ ಎಚ್‌ಕೆ) ವೃಂದದ ಹುದ್ದೆಗಳ ಹಂಚಿಕೆ ಮತ್ತು ಮೀಸಲಾತಿ ನಿಗದಿಯಲ್ಲಿ ಗೊಂದಲ ಉಂಟಾಗಿತ್ತು.
ಹೀಗಾಗಿ ಗೊಂದಲ ನಿವಾರಣೆಯಾಗುವವರೆಗೆ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಕೋರಿ ನರೇಂದ್ರಬಾಬು ಜಿ.ವಿ ಮತ್ತು ಇತರರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾ. ಆರ್ ದೇವದಾಸ್ ಅವರಿದ್ದ ನ್ಯಾಯಪೀಠವು ಆಯ್ಕೆ ಪಟ್ಟಿಯನ್ನು ರದ್ದುಗೊಳಿಸುವ ಆದೇಶ ಪ್ರಕಟಿಸಿತು. ನಿಯಮಾನುಸಾರ ಎಲ್ಲ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ, ಮೂರು ತಿಂಗಳೊಳಗೆ ಹೊಸದಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಸರ್ಕಾರದ ಪರ ಹಾಜರಾದ ಪದಾಂಕಿತ ಹಿರಿಯ ವಕೀಲ ರೂಬೆನ್ ಜಾಕೊಬ್, ‘ಅಭ್ಯರ್ಥಿಗಳು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ ಮೀಸಲಾತಿಯ ಗೊಂದಲಗಳ ಬಗ್ಗೆ ಗಮನ ಸೆಳೆದಿದ್ದಾರೆ. ಹೀಗಾಗಿ ಇಡಿ ಆಯ್ಕೆ ಪಟ್ಟಿ ರದ್ದತಿ ನಿರ್ದಿಷ್ಟ ವಿಷಯಗಳ ಆಯ್ಕೆ ಪಟ್ಟಿಯ ಕುರಿತು ನಿರ್ಣಯ ಪ್ರಕಟಿಸಬೇಕು’ ಎಂಬ ಮನವಿಯನ್ನು ಪೀಠವು ಪುರಸ್ಕರಿಸಲಿಲ್ಲ.
ನೇಮಕಾತಿ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿಸಿದ್ದ ಜನವರಿ 31, 2024ರ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸುತ್ತೋಲೆಯನ್ನೂ ನ್ಯಾಯಪೀಠವು ರದ್ದುಪಡಿಸಿದೆ.