ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರಕೂಟರ ಕುಲದೇವತೆಯೆಂದೆ ಖ್ಯಾತಿ ಪಡೆದ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವವು ಸೋಮವಾರ ಅಪಾರ ಜನಸಾಗರದ ಮಧ್ಯೆ ಅದ್ಧೂರಿಯಾಗಿ ಜರುಗಿತು.
ಮಧ್ಯಾಹ್ನ ಸರಾಫ್ ಲಚ್ಚಪ್ಪ ನಾಯಕ ಅವರ ನಿವಾಸದಲ್ಲಿ ವಿಘ್ನೇಶ್ವೆರ, ಗುರು ಹಾಗೂ ದೇವಿಯ ಪಲ್ಲಕ್ಕಿ ಪೂಜೆಯನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ, ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮತ್ತು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಯಿತು.
ಸಕಲ ಮಂಗಳ ವಾದ್ಯಗಳೊಂದಿಗೆ ಗಣಪತಿ ಹಾಗೂ ದೇವಿಯ ಮೂರ್ತಿಯು ಹೊತ್ತ ಪಲ್ಲಕ್ಕಿ ಉತ್ಸವನ್ನು ಸರಾಫ್ ಲಚ್ಚಪ್ಪ ನಾಯಕರವರ ನಿವಾಸದಿಂದ ಆರಂಭಗೊಂಡು ಪಟ್ಟಣದ ಚಿತ್ತಾವಲಿ ಚೌಕ್, ಕಿರಾಣಾ ಬಜಾರ, ಜನತಾ ಚೌಕ, ನಾಗಾವಿ ಚೌಕ ಮತ್ತು ಒಂಟಿ ಕಮಾನ ಸೇರಿದಂತೆ ವಿವಿಧ ಪ್ರಮುಖ ಬೀದಿಗಳ ಮೂಲಕ ರಾತ್ರಿ ನಾಗಾವಿ ಯಲ್ಲಮ್ಮ ದೇವಸ್ಥಾನ ತಲುಪಿತು.
ಮೆರವಣಿಗೆಯಲ್ಲಿ ಡಿಜೆ, ಬ್ಯಾಂಡ್ ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಲೇಜಿಮ್, ಕೋಲಾಟ, ಯುವಕರ ಕುಣಿತ, ಬಣ್ಣ ಬಣ್ಣದ ಕೊಡೆಗಳು, ಧ್ವಜಗಳು, ಭಜನೆ ಜನಮನ ಸೆಳೆದವು. ಸುಮಂಗಲೆಯರು ಹೊತ್ತ ಕಳಸ, ಕುಂಭ ನೋಡುಗರಿಗೆ ಆಕರ್ಷಣೆಯಾಗಿದ್ದವು.