ದಸರಾ ಅಂಬಾರಿ ಆನೆ ಆಯ್ಕೆ ವಿಚಾರ ನನ್ನಿಂದ ಮುಚ್ಚಿಡಲಾಗಿತ್ತು: ಪ್ರಮೋದಾದೇವಿ ಒಡೆಯರ್ ಬೇಸರ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಎಂದರೆ ಬಂಬೂಸವಾರಿ. ಈ ಬಾರಿಯ ಬಂಬೂಸವಾರಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕ್ಯಾಪ್ಟನ್ ಪ್ರಶಾಂತ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಹೊತ್ತು ಮೆರೆಸಿದ್ದಾನೆ. ಆದರೆ ‘ಗಜಪಡೆ ಕ್ಯಾಪ್ಟನ್ ಆಯ್ಕೆ ವಿಷಯ ನನ್ನ ಬಳಿ ಮುಚ್ಚಿಡಲಾಗಿತ್ತು’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ನಾನೆ ಖುದ್ದಾಗಿ ಕೇಳಿದರೂ ಮಾಹಿತಿ ಕೊಡಲಿಲ್ಲ
ಈ ಕುರಿತಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ‘45 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಗಜಪಡೆ ಕ್ಯಾಪ್ಟನ್ ಆಯ್ಕೆ ವಿಚಾರ ಮುಚ್ಚಿಟ್ಟಿದ್ದಾರೆ. ಕೊನೆ ಕ್ಷಣದವರೆಗೂ ನನಗೆ ಅಂಬಾರಿ ಆನೆ ಬಗ್ಗೆ ಮಾಹಿತಿ ಕೊಡಲಿಲ್ಲ. ನಾನೆ ಖುದ್ದಾಗಿ ಕೇಳಿದರೂ ಡಿಸಿಎಫ್ ಯಾವುದೆ ಮಾಹಿತಿ ಕೊಡಲಿಲ್ಲ. ಒಂದು ವಾರ ಮುಂಚಿತವಾಗಿ ಅಂಬಾರಿ ಆನೆ ವಿಚಾರ ತಿಳಿಸಿ ಎಂದು ನಾನೆ ಕೇಳಿದರೂ ತಿಳಿಸಲಿಲ್ಲ. ಕೊನೆಗೆ DCF ಮೂಲಕ ಜಂಬೂಸವಾರಿ ಆನೆ ಬಗ್ಗೆ ತಿಳಿದುಕೊಳ್ಳಬೇಕಾಯಿತು, ಇದು ನನಗೆ ತೀವ್ರ ಬೇಸರ ಉಂಟುಮಾಡಿದೆ’ ಎಂದಿದ್ದಾರೆ.

ಸರ್ಕಾರಕ್ಕೆ ಸಲಹೆ ನೀಡಿದ ಪ್ರಮೋದಾದೇವಿ ಒಡೆಯರ್
ಮೈಸೂರು ದಸರಾ ಹಿನ್ನೆಲೆ ಅರಮನೆಯಲ್ಲಿ ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಸರ್ಕಾರಕ್ಕೆ ಪ್ರಮೋದಾದೇವಿ ಒಡೆಯರ್ ಕೆಲ ಸಲಹೆ ನೀಡಿದ್ದಾರೆ. ಮೊದಲ ದಿನದಿಂದ 7ನೇ ದಿನದವರೆಗೆ ಸರ್ಕಾರ ಎಂದಿನಂತೆಯೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಹುದು. ಆಯುಧ ಪೂಜೆ, ವಿಜಯದಶಮಿ ದಿನದಂದು ಅರಮನೆ ಆವರಣವನ್ನು ಮುಕ್ತವಾಗಿಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇದರಿಂದ ರಾಜ ಕುಟುಂಬ ಯಾವುದೆ ಹೊರಗಿನ ಹಸ್ತಕ್ಷೇಪವಿಲ್ಲದೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಆಯುಧ ಪೂಜೆ, ವಿಜಯದಶಮಿ ಆಚರಣೆ ನಡೆಸಲು ಸಾಧ್ಯವಾಗುತ್ತದೆ. ಚಾಮುಂಡಿಬೆಟ್ಟದಲ್ಲಿ ರಥೋತ್ಸವ ನಡೆಯುವ ದಿನದಂದೆ ಸರ್ಕಾರ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಮೆರವಣಿಗೆ ನಡೆಸಬಹುದು. ಅಂದು ಸಂಜೆ ಸೂಕ್ತ ಸಮಯದಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಈ ಮೆರವಣಿಗೆಯನ್ನು ನಡೆಸುವುದು ಸೂಕ್ತವಾಗಿರುತ್ತದೆ ಎಂದು ಸರ್ಕಾರಕ್ಕೆ ಪ್ರಮೋದಾದೇವಿ ಒಡೆಯರ್ ಸಲಹೆ ನೀಡಿದ್ದಾರೆ.

ಜಟ್ಟಿ ಕಾಳಗ ರದ್ದಾಗಿದ್ದು ಇದೆ ಮೊದಲಲ್ಲ ಎಂದ ಪ್ರಮೋದಾದೇವಿ
ಜಟ್ಟಿ ಕಾಳಗ ರದ್ದಾದ ಬಗ್ಗೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ‘ಜಟ್ಟಿ ಕಾಳಗ ರದ್ದಾಗಿದ್ದು ಇದೆ ಮೊದಲಲ್ಲ. 1970 ಮತ್ತು 1980ರಲ್ಲಿ ಎರಡು ಬಾರಿ ರದ್ದಾಗಿತ್ತು. ಜಟ್ಟಿ ಕಾಳಗಕ್ಕೆ ಯಾವುದೆ ಧಾರ್ಮಿಕ‌ ಮಹತ್ವವೂ ಇಲ್ಲ, ಯಾವುದೆ ಸಂಕೇತವೂ ಅಲ್ಲ. ಅದು ಕುಸ್ತಿ ಪಂದ್ಯದ ಅಂತ್ಯ ಅಷ್ಟೆ, ಇದು ಒಂದು ಕ್ರೀಡೆಯ ಭಾಗ. ಇದರ ಆಚೆಗೆ ಇದಕ್ಕೆ ಪ್ರತ್ಯೇಕ ಮಹತ್ವ ಇಲ್ಲ. ಬೂದುಕುಂಬಳಕಾಯಿ ಕತ್ತರಿಸುವ ವಿಧಿ ಮಾತ್ರ ನಮ್ಮ ಆಚರಣೆಯ ಸೂಚಕ. ಜಟ್ಟಿ ಕಾಳಗ ಇದರ ಭಾಗವಲ್ಲ. ನಾವು, ನಮ್ಮ ಮುಹೂರ್ತದಂತೆ ವಿಜಯಯಾತ್ರೆ ನಡೆಸಿದ್ದೆವೆ. ಪೊಲೀಸರು, ಜಟ್ಟಿ ಉಸ್ತಾದ ಸಮನ್ವಯ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆ ಪ್ರತಿ ವರ್ಷವೂ ಇದೆ, ಇದು ಹೊಸದಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *