ಸುದ್ದಿ ಸಂಗ್ರಹ

ವಾಡಿ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

​ಶ್ರೀಮಂತ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆಯ ಪವಿತ್ರ ದಿನವೇ ವಾಲ್ಮೀಕಿ ಜಯಂತಿ: ವೀರಣ್ಣ ಯಾರಿ

​ಸುದ್ದಿ ಸಂಗ್ರಹ ವಾಡಿ
ಹಿಂದೂ ಮಹಾಕಾವ್ಯ ರಾಮಾಯಣದ ಮೂಲ ಲೇಖಕ, ಮಹರ್ಷಿ ವಾಲ್ಮೀಕಿಯವರ ಜನ್ಮದಿನದ ವಾರ್ಷಿಕೋತ್ಸವ ಸ್ಮರಿಸುವ ಪವಿತ್ರ ದಿನವಾಗಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

​ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
​ನಮ್ಮ ನೆಲದ ಪವಿತ್ರ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವು ಭಾರತೀಯರ ಜೀವನಚರಿತ್ರೆ ಹಾಗೂ ಸಂಸ್ಕೃತಿಯನ್ನು ಜಗತ್ತಿಗೆ ಪ್ರತಿಬಿಂಬಿಸುವ ಮಹಾನ್ ಗ್ರಂಥವಾಗಿದೆ. ರಾಮಾಯಣದ ವಿವಿಧ ನೈಜ ಪಾತ್ರಗಳ ಮೂಲಕ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ನಮಗೆ ಮನವರಿಕೆ ಮಾಡಿಕೊಡಲಾಗಿದೆ. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಉನ್ನತ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ ಎಂದು ಬಣ್ಣಿಸಿದರು.

ಅಲ್ಲದೆ, ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ ಹಾಗೂ ಪಿತೃವಾಕ್ಯ ಪರಿಪಾಲನೆಯಂತಹ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿರುವ ರಾಮಾಯಣವು ಈ ಸೃಷ್ಟಿ ಇರುವವರೆಗೆ ನಮ್ಮ ಜೀವನದ ಮೌಲ್ಯಗಳನ್ನು ಜೀವಂತವಾಗಿಡುತ್ತದೆ ಎಂದರು.

​ಈ ವೇಳೆ ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ ಮಾತನಾಡಿ, ಸಮುದ್ರಕ್ಕೆ ಸೇತುವೆ ಕಟ್ಟಲು ಬಂಡೆಗಳನ್ನು ಹಾಕುತ್ತಿದ್ದ ವಾನರ ಸೈನ್ಯದ ಮುಂದೆ ಅಳಿಲಿನ ಸೇವೆ ಸಣ್ಣದಾಗಿ ಕಂಡರೂ, ಶ್ರೀರಾಮನು ಅದನ್ನು ಮೆಚ್ಚಿ ಆಶೀರ್ವದಿಸಿದನು. ಯಾವುದೇ ಉದಾತ್ತ ಕೆಲಸಕ್ಕೆ ನೀಡುವ ಸಣ್ಣ ಕೊಡುಗೆಯೂ ವ್ಯರ್ಥವಾಗುವುದಿಲ್ಲ ಎಂಬುದೇ ರಾಮಾಯಣದ ಸಾರ. ಆ ನಿಟ್ಟಿನಲ್ಲಿ ನಾವೆಲ್ಲರೂ ಧರ್ಮ ಹಾಗೂ ಪಕ್ಷದ ಕಾರ್ಯದಲ್ಲಿ ನಿಷ್ಠೆಯಿಂದ ಶ್ರಮಿಸಬೇಕಾಗಿದೆ ಎಂದರು.
​
​ಕಾರ್ಯಕ್ರಮದಲ್ಲಿ ಯುವ ಮುಖಂಡ ವಿಠಲ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ ದೊರೆ, ಉಪಾಧ್ಯಕ್ಷ ಸುಭಾಷ ಚಾಮನೂರ, ಯುವ ಅಧ್ಯಕ್ಷ ರಾಮಕೃಷ್ಣ ಜಮಾದರ, ಜಗದೇವ ಮಾಲಗತ್ತಿ, ಹಣಮಂತ ರದ್ದೆವಾಡಗಿ, ಪಕ್ಷದ ಪ್ರಮುಖರಾದ ಶರಣಗೌಡ ಚಾಮನೂರ, ಭೀಮಶಾ ಜಿರೋಳ್ಳಿ, ಕಿಶನ ಜಾಧವ, ಅಂಬದಾಸ ಜಾಧವ, ಮಲ್ಲಿಕಾರ್ಜುನ ಸಾತಖೇಡ, ಬಸವರಾಜ ಕಿರಣಗಿ, ಕಾಶಿನಾಥ ಶೆಟಗಾರ, ಪ್ರಕಾಶ ದಂಡೋತಿ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಶರಣಮ್ಮ ಯಾದಗಿರಿ ಸೇರಿದಂತೆ ಸಮಾಜದ ಹಾಗೂ ಪಕ್ಷದ ಹಲವು ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *