ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಹಸೀಲ್ದಾರ್‌ಗೆ 4 ವರ್ಷ ಜೈಲು

ಜಿಲ್ಲೆ

ಸುದ್ದಿ ಸಂಗ್ರಹ ಕಲಬುರಗಿ
1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ತಹಸೀಲ್ದಾರ್‌ ಶಶಿಕಲಾ ಪಾದಗಟ್ಟಿ ಸೇರಿದಂತೆ ಇಬ್ಬರಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯವು ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ತಲಾ 20 ಸಾವಿರ ರೂ ದಂಡ ವಿಧಿಸಿದೆ.

2017ರಲ್ಲಿ ಅಫಜಲಪುರದ ತಹಸೀಲ್ದಾರ್‌ ಆಗಿದ್ದ ಶಶಿಕಲಾ ಪಾದಗಟ್ಟಿ ಹಾಗೂ ದೂರುದಾರನಿಂದ ಲಂಚದ ಹಣ ಪಡೆದು ತಹಸೀಲ್ದಾರ್‌ಗೆ ತಲುಪಿಸಿದ್ದ ಶಿವಾನಂದ ಜಮಖಂಡಿ ಶಿಕ್ಷೆಗೆ ಗುರಿಯಾದವರು.

ಶಶಿಕಲಾ ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವಾರವಷ್ಟೆ ರಾಜ್ಯ ಸರ್ಕಾರ ಅವರಿಗೆ ಕಡ್ಡಾಯ ನಿವೃತ್ತಿಗೆ ಸೂಚಿಸಿ, ಕೆಲಸದಿಂದ ಬಿಡುಗಡೆ ಮಾಡಿತ್ತು.

ಘಟನೆಯ ವಿವರ: ಅಫಜಲಪುರ ತಾಲೂಕಿನ ಕರಜಗಿ ನಾಡ ಕಚೇರಿಯಲ್ಲಿ ಗುತ್ತಿಗೆ ಆಧಾರದ ಡೇಟಾ ಎಂಟ್ರಿ ಆಪರೇಟರ್‌ ಶಿವಲಿಂಗಯ್ಯ ಬಸಯ್ಯ ಮಠ ಅವರು ಕೆಲಸ ಮಾಡಿಕೊಡಲು ಹಣ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರು ತಹಸೀಲ್ದಾರ್‌ಗೆ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ತಮಗೆ ಸಹಾಯ ಮಾಡುವಂತೆ ಶಿವಲಿಂಗಯ್ಯ ಕೋರಿದಾಗ, ‌ಶಶಿಕಲಾ ಅವರು 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ‘ಹಣವನ್ನು ಶಿವಾನಂದ ಜಮಖಂಡಿಗೆ ತಲುಪಿಸಬೇಕು. ಇಲ್ಲದಿದ್ದರೆ ಬೇರೆಯವರನ್ನು ನೇಮಿಸಿಕೊಳ್ಳಲಾಗುವುದು’ ಎಂದು ಬೆದರಿಸಿದ್ದರು.

ಈ ಕುರಿತು ಶಿವಲಿಂಗಯ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. 2017ರ ಆಗಸ್ಟ್‌ 31ರಂದು ಶಿವಲಿಂಗಯ್ಯ ನೀಡಿದ ಲಂಚದ ಹಣವನ್ನು ಶಿವಾನಂದ ಜಮಖಂಡಿ, ಶಶಿಕಲಾ ಅವರಿಗೆ ತಲುಪಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು.

ಡಿವೈಎಸ್‌ಪಿ ಸಂತೋಷ ಬನ್ನಟ್ಟಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಕೃಷ್ಣಪ್ಪ ಕಲ್ಲದೇವರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್‌ ಲಕ್ಷ್ಮಿನಾರಾಯಣ ಅವರು ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಎಸ್‌.ಚಾಂದಕವಠೆ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *