ಕಲಬುರಗಿ: ದೃಶ್ಯ ಕಲೆಯು ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮವಾಗಿದ್ದು, ಇದು ಮನುಷ್ಯರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಸಮಾಜದಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ, ಅವುಗಳಿಗೆ ಪರಿಹಾರವನ್ನು ಸೂಚಿಸಿ ಸಮಾಜದ ಸಮತೋಲನ ಸ್ಥಿತಿಯನ್ನು ಕಾಪಾಡುವ ಶಕ್ತಿ ದೃಶ್ಯಕಲೆಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಸಂಜೆ ಜರುಗಿದ ‘ವಿಶ್ವ ಕಲಾ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಚಿತ್ರಕಲೆಯು ಘಟನೆ, ಸಂದರ್ಭದ ನೈಜತೆಯನ್ನು ಕಣ್ಣಿಗೆ ಕಟ್ಟುವ ಹಾಗೆ ನೀಡುತ್ತದೆ. ಇದು ಶಾಶ್ವತವಾದ ದಾಖಲೆಯಾಗಿದೆ. ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನ ಎಂಬ ಮಾತು ಚಿತ್ರಕಲೆಯ ಮಹತ್ವವನ್ನು ಸಾರುತ್ತದೆ. ಚಿತ್ರ ಕಲಾವಿದರಲ್ಲಿರುವ ಕಲ್ಪನಾ ಶಕ್ತಿ ಅದ್ಭುತವಾಗಿದೆ. ಇಂದಿನ ಯಾಂತ್ರಿಕೃತ ಬದುಕಿನಲ್ಲಿ ಸಂಬAಧಗಳ ಹುಡುಕಾಟದ ಸಮಯದಲ್ಲಿ ಕಲೆಯೆಂಬುದು ಜೀವಂತಿಕೆಯನ್ನು ಒದಗಿಸಿಕೊಡುತ್ತದೆ. ಕಲೆಯು ಮುಂದಿನ ಪೀಳಿಗೆಗೆ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ವರ್ಗಾಯಿಸುತ್ತದೆ. ಜಾತಿ, ಧರ್ಮ, ವ್ಯಾಪ್ತಿ, ಪ್ರದೇಶಗಳನ್ನು ಮೀರಿದ್ದಾಗಿದ್ದು, ಮೌನ ಭಾಷೆಯಾಗಿದೆ. ಚಿತ್ರಕಲಾ ಕ್ಷೇತ್ರಕ್ಕೆ ಲಿಯೋನಾರ್ಡೋ ಡ್ ವಿನ್ಸಿ ಅವರ ಕೊಡುಗೆ ಅನನ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಸಿದ್ದಾರೂಡ ಬಿರಾದಾರ, ಸುಭಾಷ್ ಕೇಶ್ವಾರ, ಗಣೇಶ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.