ಲಾಲ್‌ಬಾಗ್‌ನಲ್ಲಿ ನಿರ್ಮಾಣವಾಗುತ್ತಿದೆ ಮಂಜಿನ ಲೋಕ: ಸಿಂಗಾಪುರ ಮಾದರಿಯ ಉದ್ಯಾನವನ

ನಗರದ

ಸುದ್ದಿ ಸಂಗ್ರಹ ಬೆಂಗಳೂರು
ಬೆಂಗಳೂರಿನ ಸಸ್ಯ ಕಾಶಿ ಲಾಲ್​ಬಾಗ್​ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ. ಇದು ಕೇವಲ ಪ್ರಕೃತಿ ಪ್ರಿಯರ ನೆಚ್ಚಿನ ತಾಣ ಮಾತ್ರವಲ್ಲದೆ, ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಕೂಡ ಆಗಿದೆ. ಇದೀಗ ಇದೆ ಲಾಲ್‌ಬಾಗ್​ನಲ್ಲಿ ಮತ್ತೊಂದು ವಿಶೇಷ ಅನುಭವ ನೀಡಲು ತೋಟಗಾರಿಕಾ ಇಲಾಖೆ ಮುಂದಾಗಿದೆ.

ಲಾಲ್‌ಬಾಗ್​ನಲ್ಲಿ ಮಂಜಿನ ಉದ್ಯಾನವನ
ಬೆಂಗಳೂರಿನ ಲಾಲ್‌ಬಾಗ್​ಗೆ ಭೇಟಿ ನೀಡುವುದೆಂದರೆ ಅದೇನೋ ಬೆಂಗಳೂರು ಬಿಟ್ಟು ಹೊರಗೆ ಹೋದಂತಹ ಅನುಭವ. ಏಕೆಂದರೆ ಈ ಸಸ್ಯ ಕಾಶಿಯ ವಾತಾವರಣ ಅಷ್ಟು ಹಿತವೆನಿಸುತ್ತದೆ. ಇನ್ನು ಈ ಅನುಭವವನ್ನು ಮತ್ತಷ್ಟು ವಿಶೇಷವಾಗಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. 2.5 ಎಕರೆ ಹೊರಾಂಗಣ ಮಂಜಿನ ಉದ್ಯಾನವನ ತೆರೆಯಲು ಸಜ್ಜಾಗಿದ್ದು, ಇದು ನೈಸರ್ಗಿಕ ನೆರಳು, ಅಪರೂಪದ ಸಸ್ಯಗಳು ಮತ್ತು ಸುಮಾರು 300 ಫಾಗರ್‌ಗಳ ಸಂಯೋಜನೆಯ ಮೂಲಕ ಬಂಡೆಗಳು, ಕಾಲುವೆಗಳು, ಸೇತುವೆಗಳು ನಿರ್ಮಾಣವಾಗಲಿದೆ.

ಲಾಲ್‌ಬಾಗ್‌ನ ಡಬಲ್ ರೋಡ್ ಗೇಟ್ ಬಳಿಯ ನೈಸರ್ಗಿಕ ಕಣಿವೆಯ ಎರಡು ಬದಿಗಳಲ್ಲಿ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯು ಈ ಉದ್ಯಾನವನವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಸ್ಥಳವು ಥೈಲ್ಯಾಂಡ್, ಚೀನಾ ಮತ್ತು ಭಾರತದ ವಿವಿಧ ಭಾಗಗಳಿಂದ ತರಲಾದ ಸುಮಾರು 200 ಬಗೆಯ ವರ್ಣರಂಜಿತ ಸಸ್ಯಗಳು ಒಳಗೊಂಡಿದೆ.

ಒಂದು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ
ನೆಲ ಸಿದ್ಧತೆ, ಸ್ಪ್ರಿಂಕ್ಲರ್ ಅಳವಡಿಕೆ ಮತ್ತು ನೈಸರ್ಗಿಕ ಕಲ್ಲುಗಳ ನಿಯೋಜನೆ ಪೂರ್ಣಗೊಂಡಿದ್ದು, ಫಾಗಿಂಗ್ ಮೂಲಸೌಕರ್ಯ ಮತ್ತು ಇತರೆ ಸಸಿಗಳ ನೆಡುವುದು ಸೇರಿದಂತೆ ಉಳಿದ ಕೆಲಸಗಳು ಸುಮಾರು ಒಂದು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ‘ಈ ಮಂಜಿನ ಉದ್ಯಾನವನ ವಿಶೇಷ ಅನುಭವ ನೀಡಲಿದೆ’ ಎಂದು ಸಾರ್ವಜನಿಕರು ಹೇಳಿದ್ದಾರೆ.

ಇನ್ನು ಈ ಯೋಜನೆ ಸಿಂಗಾಪುರದಲ್ಲಿರುವ ಮಂಜು ತೋಟದಿಂದ ಪ್ರೇರಿತವಾಗಿದ್ದು, ಹಲವು ಹೊಸ ಪರಿಕಲ್ಪನೆಗಳನ್ನ ಒಳವಡಿಸಿಕೊಳ್ಳಲಾಗಿದೆ. ಒಟ್ಟಾರೆ ಲಾಲ್​ಬಾಗ್​ಗೆ ಭೇಟಿ ನೀಡುವ ಜನರು ಕೆಲವೇ ದಿನಗಳಲ್ಲಿ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗುವುದು ಖಚಿತವಾಗಿದೆ.

Leave a Reply

Your email address will not be published. Required fields are marked *