ಮೈಸೂರು ದಸರಾ ಮಹೋತ್ಸವ: ಕೊಪ್ಪಳದ ಗವಿಮಠದ ಶ್ರೀಗಳಿಂದ ಚಾಲನೆ

ಜಿಲ್ಲೆಯ

ಸುದ್ದಿ ಸಂಗ್ರಹ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ 416ನೇ ನಾಡಹಬ್ಬ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.

ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 11:50 ರಿಂದ 12:13ರ ಶುಭ ಧನುರ್ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರರು ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಆರಂಭದಲ್ಲಿ ಪತ್ನಿ ಉಷಾ ಜೊತೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಚಾಮುಂಡಿ ಬೆಟ್ಟದಲ್ಲಿ ಪೂರ್ಣಕುಂಭ ಸ್ವಾಗತ ಕೋರಲಾಯಿತು.

ಮೊದಲಿಗೆ ಸಿಎಂ ಡಿ.ಕೆ ಶಿವಕುಮಾರ್ ಅವರು ಸಾಂಪ್ರದಾಯಿಕ ನಂದಿಧ್ವಜ ಕಂಬಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಜಾನಪದ ಕಲಾತಂಡಗಳ ವಾದ್ಯ-ಮೇಳಗಳ ಮುಂಚೂಣಿಯಲ್ಲಿ, ಮೆರವಣಿಗೆಯ ಮೂಲಕ ಚಾಮುಂಡೇಶ್ವರಿ ದೇವಾಲಯದತ್ತ ಸಾಗಿದರು. ದೇವಾಲಯದ ಮುಂಭಾಗದಲ್ಲಿ ಮುಖ್ಯಮಂತ್ರಿಗಳು ನಾಲ್ಕು ಈಡುಗಾಯಿಗಳನ್ನು ಒಡೆದು ಭಕ್ತಿ ಸಮರ್ಪಿಸಿದರು.

ದೇವಾಲಯ ಪ್ರವೇಶಿಸಿದ ಸಿಎಂ ದಂಪತಿ, ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳೊಂದಿಗೆ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸಾಥ್ ನೀಡಿದರು.

ಪೂಜಾ ವಿಧಿವಿಧಾನಗಳ ನಂತರ ಗಣ್ಯರು ಮುಖ್ಯ ವೇದಿಕೆಗೆ ಆಗಮಿಸಿದರು. ಶುಭ ಧನುರ್ ಲಗ್ನದಲ್ಲಿ ಬೆಳ್ಳಿ ರಥದಲ್ಲಿ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಸಿಎಂ ಡಿ.ಕೆ ಶಿವಕುಮಾರ್ ಅವರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ವಹಿಸಿದ್ದರು.

ವೇದಿಕೆಯಲ್ಲಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ರಿಜ್ವಾನ್ ಅರ್ಷದ್, ಈಶ್ವರ್ ಖಂಡ್ರೆ, ಡಾ. ಅಜಯ್ ಸಿಂಗ್, ಸಿ. ಪುಟ್ಟರಂಗಶೆಟ್ಟಿ ಮತ್ತು ಸಿಎಂ ಪತ್ನಿ ಉಷಾ ಶಿವಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *