ಫೆ.15 ರಂದು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೀಪೋತ್ಸವ, ಸಂಗೀತೋತ್ಸವ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಶಿವರಾತ್ರಿ ನಿಮಿತ್ಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಫೆ.15 ರಂದು ದೀಪೋತ್ಸವ ಮತ್ತು ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯ ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ವತಿಯಿಂದ ಫೆಬ್ರವರಿ 15ರಂದು ಸಂಜೆ 6 ಗಂಟೆಗೆ ದೀಪೋತ್ಸವ ಹಾಗೂ ಜನಪದ, ತತ್ವಪದಗಳ ಸಂಗೀತೋತ್ಸವ ಮತ್ತು ಅಂತ್ಯಾಕ್ಷರಿ ವಿಶೇಷ ಕಾರ್ಯಕ್ರಮ ಜರುಗುವುದು ಎಂದರು.

ದೀಪೋತ್ಸವ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ ಅಲಂಖಾನ್ ಮತ್ತು ಸಂಗೀತೋತ್ಸವ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ನಗರ ಅಧ್ಯಕ್ಷ ಚಂದು ಪಾಟೀಲ ಉದ್ಘಾಟಿಸುವರು. ರಾಷ್ಟೀಯ ದೇಹಾಂಗದಾನ ಜಾಗೃತಿ ಸಮಿತಿ ಅಧ್ಯಕ್ಷ ಶಿವಾನಂದ ಹೂಗಾರ, ಮಹಾನಗರ ಪಾಲಿಕೆ ಸದಸ್ಯೆ ಯಂಕಮ್ಮ ಗುತ್ತೇದಾರ ಅತಿಥಿಗಳಾಗಿ ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ವಹಿಸಲಿದ್ದಾರೆ. ದೀಪೋತ್ಸವ ಪ್ರಾಯೋಜಕ ಹಾಗೂ ಸಂಗೀತೋತ್ಸವ ವಿಶಾಲ ರಟಕಲ್, ಉಮೇಶ ಶೆಟ್ಟಿ, ಗುರುಲಿಂಗಯ್ಯ ಮಠಪತಿ ಉಪಸ್ಥಿತರಿರುವರು.

ಆಕಾಶವಾಣಿ- ದೂರದರ್ಶನ ಕಲಾವಿದರಾದ ಅಣ್ಣಾರಾವ ಶೆಳ್ಳಗಿ ಮತ್ತಿಮುಡ, ಆನಂದ ನಂದಿಕೋಲಮಠ, ಕಲ್ಯಾಣಿ ಶೀಲವಂತ, ಮೌನೇಶ ಪಂಚಾಳ ಅವರಿಂದ ಸಂಗೀತ ಕಾರ್ಯಕ್ರಮ ಮತ್ತು ಹಿರಿಯ ಸಂಗೀತ ಕಲಾವಿದರಿಂದ ಅಮೃತಪ್ಪ ಅಣೂರ ಕವಿಗಳು, ಎಂ.ಎನ್ ಸುಗಂದಿ ಮತ್ತು ರಾಜವಿಕಾ ಶಾಲೆಯ ಮಕ್ಕಳಿಂದ ಭಕ್ತಿಗೀತೆ, ತತ್ವಪದ, ಜನಪದ ಗೀತೆಗಳ ಸಂಭ್ರಮ ಜರುಗುವುದು.

ರಾತ್ರಿ 10 ಗಂಟೆಗೆ ವಿದ್ಯಾನಗರದ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಮತ್ತು ಪ್ರಗತಿ ಕಾಲೋನಿಯ ಅಕ್ಕನಾಗಮ್ಮ ಭಜನಾ ಮಂಡಳಿ ಮಹಿಳೆಯರಿಂದ ವಿಶೇಷ ಭಜನಾ ಕಾರ್ಯಕ್ರಮ ಜರುಗುವುದು. ವಿದ್ಯಾನಗರದ ಸುತ್ತಮುತ್ತಲಿನ ಬಡಾವಣೆಯ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿವರಾಜ ಅಂಡಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *