ನಕಲಿ ಅಂಕಪಟ್ಟಿ: 52 ಗ್ರೂಪ್ ಡಿ ಸಿಬ್ಬಂದಿ ಅಮಾನತು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ಕಳೆದ 2015ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಡಿ ಗ್ರೂಪ್ ಹುದ್ದೆಗೆ ಆಯ್ಕೆಯಾಗಿದ್ದ 52 ಜನ ಸಿಬ್ಬಂದಿ ಸಲ್ಲಿಸಿದ್ದ ಎಸ್ಸೆಸ್ಸೆಲ್ಸಿ ಅಂಕ ಪಟ್ಟಿ ನಕಲಿ ಎಂದು ದೃಢಪಟ್ಟಿದ್ದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಶಿಸ್ತು ಪ್ರಾಧಿಕಾರದ ನಿರ್ದೇಶಕಿ ರಜನಿ ಎಂ ಅವರು ಈ ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ಅಮಾತುಗೊಳಿಸಿ ಸೆ.22 ರಂದು ಆದೇಶ ಹೊರಡಿಸಿದ್ದಾರೆ. ಆದರೆ ಅದೆ ದಿನ ಇವರೆಲ್ಲರಿಗೂ ಸ್ಥಳ ನಿಯುಕ್ತಿಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಮಾನತುಗೊಂಡಿರುವ ಕಲಬುರಗಿ, ಯಾದಗಿರಿ ಮತ್ತು ಬೀದರ ಜಿಲ್ಲೆಯ ಒಟ್ಟು 52 ಜನ ಸಿಬ್ಬಂದಿ ಪೈಕಿ ವಾಡಿ (ಜಂ)-4, ಗುಂಡಗುರ್ತಿ-5, ಶಾಹಾಬಾದ್-1, ಕಾಳಗಿ-1 ಒಟ್ಟು 11 ಜನ ಡಿ ಗ್ರೂಪ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ ಎಂದು ನಿರ್ದೇಶಕರು ಹೊರಡಿಸಿರುವ ಅಮಾನತು ಆದೇಶದಲ್ಲಿದೆ.

ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ-2, ದೇವಲ ಗಾಣಗಾಪುರ-6, ಸೇಡಂ ತಾಲೂಕಿನ ಮಳಖೇಡ-3, ಮುಧೋಳ-1, ಚಿಂಚೋಳಿ ತಾಲೂಕು ಆಸ್ಪತ್ರೆ-2, ಜಿಲ್ಲಾ ಆಸ್ಪತ್ರೆ (500 ಹಾಸಿಗೆ)-1, ಜಿಲ್ಲಾ ಆಸ್ಪತ್ರೆ-2, ಜಿಲ್ಲಾ ಆನೆಕಾಲು ರೋಗ ನಿಯಂತ್ರಣ ಘಟಕ-1, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಾರ್ಯಾಲಯ-1, ಸೊಂತ-1, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಜೇವರ್ಗಿ-2, ಜೇವರ್ಗಿ ತಾಲೂಕಿನ ನೆಲೋಗಿ-1, ಯಡ್ರಾಮಿ-1 ಹೀಗೆ ವಿವಿಧ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿ ಅಮಾನತುಗೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ಸಗರ, ದೋರನಹಳ್ಳಿ, ಹೇಮನೂರ, ಶಹಾಪುರ, ವನದುರ್ಗ, ಸುರಪುರ ಆಸ್ಪತ್ರೆ ಸಿಬ್ಬಂದಿ ಮತ್ತು ಬೀದರ್‌ ಜಿಲ್ಲೆಯ ಚಿಟಗುಪ್ಪ ಆರೋಗ್ಯ ಕೇಂದ್ರದ ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದಾರೆ. ಅಮಾನತುಗೊಂಡ ಸಿಬ್ಬಂದಿಯನ್ನು ವಿಜಯಪುರ, ಯಾದಗಿರಿ, ಬೀದರ್‌ ಮತ್ತು ರಾಯಚೂರು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಿ ಆದೇಶಿಸಲಾಗಿದೆ.

ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ಹುದ್ದೆಗೆ ನೇಮಕಾತಿ ಹೊಂದಲು ಇಲಾಖೆಗೆ ಸಲ್ಲಿಸಿರುವ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿನ ಅಂಕಗಳಿಗೆ ಮತ್ತು ನೈಜ ಅಂಕ ಪಟ್ಟಿಯಲ್ಲಿನ ಅಂಕಗಳಿಗೆ ಭಾರಿ ವ್ಯತ್ಯಾಸ ಇರುವುದನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯಿಂದ ಪತ್ತೆ ಹಚ್ಚಿ ಆರೋಗ್ಯ ಇಲಾಖೆಗೆ ಸಮಗ್ರ ಮಾಹಿತಿಯ ವರದಿ ನೀಡಿದ್ದಾರೆ ಎಂದು ಆದೇಶ ಪತ್ರದಲ್ಲಿದೆ.

Leave a Reply

Your email address will not be published. Required fields are marked *