ಮಳೆಗೆ ಧರೆಗುರುಳಿದ ಐತಿಹಾಸಿಕ ಮಳಖೇಡ ಕೋಟೆ

ಸುದ್ದಿ ಸಂಗ್ರಹ

ಕಲಬುರಗಿ: ಸೇಡಂ ತಾಲೂಕಿನ ಮಳಖೇಡ ಗ್ರಾಮದ ಐತಿಹಾಸಿಕ ಕೋಟೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಧರೆಗುರುಳಿದೆ.

ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆಯ ಗೋಡೆಗಳಲ್ಲಿ ನೀರು ನಿಂತಿದೆ. ಶುಕ್ರವಾರ ರಾತ್ರಿಯಿಂದ ಮಳೆ ಆರಂಭಗೊಂಡಿದ್ದು ಶನಿವಾರವೂ ಮಳೆ ಮುಂದುವರೆದಿದೆ. ನಿಂರತ ಮಳೆಗೆ ಕೋಟೆ ಗೋಡೆಗಳು ತೇವಗೊಂಡಿದ್ದು, ಏಕಾಏಕಿ ನೀರು ಧುಮ್ಮಿಕ್ಕಿ ಬರುವಂತೆ ಕೋಟೆ ದಿಢೀರ್ ಕುಸಿದಿದೆ. ಇದರಿಂದ ಪಕ್ಕದಲ್ಲಿದ್ದ ನಿವಾಸಿಗಳು ಆತಂಕಗೊಂಡು, ಬೆಚ್ಚಿಬಿದ್ದಿದ್ದಾರೆ.

ಕೋಟೆ ಪಕ್ಕದಲ್ಲೇ ಇರುವ ಶೌಚಾಲಯ ಕಡೆಗೆ ಮಹಿಳೆಯರು ತೆರಳುತ್ತಿದ್ದರು. ಕೋಟೆ ಬೀಳುವ ಕಲ್ಲಿನ ಶಬ್ದ‌ ಕೇಳಿ ವಾಪಸ್ ಮರಳಿದ್ದಾರೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಜೀರ್ಣೋದ್ಧಾರಗೊಂಡ ಕೋಟೆಯೇ ಬಿತ್ತು: ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಿದ್ದ ಕೋಟೆ ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ. ರಾಷ್ಟ್ರಕೂಟರ ರಾಜ ಅಮೋಘವರ್ಷ ನೃಪತುಂಗ ಮಳಖೇಡ (ಮಾನ್ಯಖೇಟ) ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು.

ಆಸ್ಥಾನದಲ್ಲಿದ್ದ ಕವಿ ಶ್ರೀವಿಜಯ ‘ಕವಿರಾಜ ಮಾರ್ಗ’ ಗ್ರಂಥ ಬರೆದಿದ್ದ. ಇದು ಕನ್ನಡದ ಮೊದಲ ಉಪಲಬ್ದ ಕೃತಿಯಾಗಿದೆ. ಇಂತಹ ಐತಿಹಾಸಿಕ ಚರಿತ್ರೆಯುಳ್ಳ‌ ಮಳಖೇಡ ಕೋಟೆಯನ್ನು 2016 – 18ರ ಅವಧಿಯಲ್ಲಿ ಅಂದಿನ ಮತ್ತು ಇಂದಿನ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರು 5 ಕೋಟಿ‌ ರೂ.ಗಳ ಅನುದಾನ ನೀಡಿ ಜೀರ್ಣೋದ್ಧಾರ ಮಾಡಿಸಿದ್ದರು. ಜೊತೆಗೆ ಆಗಿನ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರು 1 ಕೋಟಿ ರೂ.ಗಳ ಅನುದಾನ ನೀಡಿದ್ದರು.

2018 ರಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಪಾಟೀಲ ಅವರ ನೇತೃತ್ವದಲ್ಲಿ ಕೋಟೆ ಜೀರ್ಣೋದ್ಧಾರದ ಜೊತೆಗೆ ಸರ್ಕಾರದಿಂದ ರಾಷ್ಟ್ರಕೂಟರ ಉತ್ಸವ ಜರುಗಿತು. ಹಳೆ ಗೋಡೆಗಳು ಬಿದ್ದಿಲ್ಲ. ಆದರೆ ಜೀರ್ಣೋದ್ಧಾರ ಮಾಡಿದ ಗೋಡೆಯೇ ಬಿದ್ದಿರುವದು ಜನರಲ್ಲಿ ಅಚ್ಚರಿ ಮೂಡಿಸಿದೆ.

Leave a Reply

Your email address will not be published. Required fields are marked *