3 ಸಾವಿರ ಲಂಚ: ಲೋಕಾಯುಕ್ತ ಬಲೆಗೆ ಕಾನ್‌ಸ್ಟೆಬಲ್

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ಜಾಮೀನಿನ ಮೇಲೆ ಹೊರಗಿದ್ದ ಆರೋಪಿಯೊಬ್ಬರಿಗೆ ಜಾಮೀನು ರದ್ದುಪಡಿಸಿ ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕಿ 3 ಸಾವಿರ ಲಂಚದ ಹಣವನ್ನು ಮಧ್ಯವರ್ತಿಯೊಬ್ಬರ ಮೂಲಕ ಫೋನ್ ಪೇ ಮಾಡಿಸಿಕೊಂಡ ಚಿಂಚೋಳಿ ತಾಲೂಕಿನ ಸುಲೇಟೇಟ್ ಠಾಣೆಯ ಕಾನ್‌ಸ್ಟೆಬಲ್‌ ಅನಿಲಕುಮಾರ್‌ ಉಳ್ಳಾಗಡ್ಡಿ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಗಡಿಕೇಶ್ವರದ ಚಂದ್ರಕಾಂತ್ ರಂಗನೂರ ಎಂಬುವವರು ಪ್ರಕರಣವೊಂದರಲ್ಲಿ ಜಾಮೀನು ಪಡೆದುಕೊಂಡಿದ್ದರು. ಪ್ರತಿ ತಿಂಗಳು ಠಾಣೆಗೆ ಭೇಟಿ ನೀಡಿ ತನಿಖಾಧಿಕಾರಿ ಎದುರು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು. ಆದರೆ ಠಾಣೆಯ ರೈಟರ್ ಆಗಿರುವ ಅನಿಲಕುಮಾರ್ ಹಣ ಕೊಡಬೇಕು ಇಲ್ಲದಿದ್ದರೆ ‌ಪ್ರತಿ ರವಿವಾರ ಠಾಣೆಗೆ ಹಾಜರಾಗುವಂತೆ ಒತ್ತಡ ಹೇರುತ್ತಿದ್ದ. ಇದರಿಂದ ಬೇಸತ್ತ ಚಂದ್ರಕಾಂತ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಶನಿವಾರ ಸಂಜೆ ಅನಿಲಕುಮಾರ್ ಸೂಚನೆ ಮೇರೆಗೆ ಚಂದ್ರಕಾಂತ್ ಅವರು ಕೃಷ್ಣ ಎಂಬಾತನ ಮೊಬೈಲ್‌ಗೆ ಫೋನ್ ಪೇ ಮಾಡಿದ್ದರು. ಇದರ ಬೆನ್ನಲ್ಲೆ ಲೋಕಾಯುಕ್ತ ಎಸ್ಪಿ ಸಿ. ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್ ರವಿಕುಮಾರ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದರು.

Leave a Reply

Your email address will not be published. Required fields are marked *