ಸುದ್ದಿ ಸಂಗ್ರಹ ಕಲಬುರಗಿ
ಬಾಲ ಮತ್ತು ಕಿಶೋರ ಮಕ್ಕಳನ್ನು ದುಡಿಸಿಕೊಂಡ ಆರೋಪದ ಮೇಲೆ ಚಿಕನ್ ಶಾಪ್, ಹೂವಿನ ಅಂಗಡಿ ಮತ್ತು ಎರಡು ಗ್ಯಾರೇಜ್‌ಗಳ ಮಾಲೀಕರ ವಿರುದ್ಧ ರೋಜಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಪಿಐ ದಿಲೀಪಕುಮಾರ ಸಾಗರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸೆ.12ರಂದು ದಾಳಿ ನಡೆಸಿದ್ದರು. ಈ ನಾಲ್ಕು ಪ್ರಕರಣಗಳಲ್ಲಿ ಒಟ್ಟು ಐದು ಮಕ್ಕಳನ್ನು ರಕ್ಷಿಸಲಾಗಿದೆ. ಈ ಕುರಿತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ದೂರು ನೀಡಿದ್ದಾರೆ.
12 ಮತ್ತು 17 ವರ್ಷದ ಇಬ್ಬರು ಬಾಲಕರನ್ನು ದುಡಿಸಿಕೊಳ್ಳುತ್ತಿದ್ದ ನೂರಬಾಗ್ ಕ್ರಾಸ್ ಅಲಕರಿಂ ಹೀರೊಹೊಂಡಾ ಸರ್ವಿಸ್ ಸೆಂಟರ್‌ನ ಮಾಲೀಕ ಎಂ.ಡಿ ಕರಿಂ ಅಲಿ ಮಹ್ಮದ್ ಖಾಸಿಂ ಅಲಿ, 14 ವರ್ಷದ ಬಾಲಕನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮದೀನಾ ಚಿಕನ್ ವರ್ಲ್ಡ್ ಶಾಪ್‌ನ ಮಾಲೀಕ ಮಹ್ಮದ್ ಅಜಗರ್ ತಂದೆ ಅಲಹಜ್ ಎಂ.ಡಿ ಫರಖುದ್ದಿನ ಬೋಸಗೆ, 12 ವರ್ಷದ ಬಾಲಕನನ್ನು ದುಡಿಸಿಕೊಳ್ಳುತ್ತಿದ್ದ ಇಸ್ಲಾಮಾಬಾದ್‌ನ ನ್ಯೂ ರಾಯಲ್ ಫ್ಲವರ್ ಶಾಪ್ ಮಾಲೀಕ ನಿಸಾರ್ ಅಹ್ಮದ್ ಅಬ್ದುಲ್ ಅಹ್ಮದ್ ಮತ್ತು 16 ವರ್ಷದ ಬಾಲಕನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಎಸ್.ಎಂ ಗ್ಯಾರೇಜ್ ಮಾಲೀಕ ಮಹ್ಮದ್ ಮಸ್ತಾನ್ ಮಹ್ಮದ್ ಶುಕುರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.