ಸುದ್ದಿ ಸಂಗ್ರಹ ಕಲಬುರಗಿ
ತಾಲೂಕಿನ ಟೋಲ್‌ನಾಕಾ ಹತ್ತಿರದ ರಾಜಸ್ಥಾನ ಡಾಬಾ ಬಳಿ ಮಹಿಂದ್ರಾ ಬೊಲೆರೊ ಪಿಕ್ ಅಪ್ ವಾಹನದಲ್ಲಿ ಶುಕ್ರವಾರ ಮಹಾರಾಷ್ಟ್ರದ ಕಡೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 2.11 ಲಕ್ಷ ಮೌಲ್ಯದ 60.3 ಕ್ವಿಂಟಲ್ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಾಹನದ ಚಾಲಕ ಅಂಬ್ರೇಶ ಬೀರಣ್ಣ ಆಳಂದ, ವಾಹನದ ಮಾಲೀಕ ಪ್ರಭಾಕರ ಬೀರಣ್ಣ ಆಳಂದ, ಅಕ್ಕಿ ಚೀಲಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. 50–55 ಕೆ.ಜಿ ತೂಕದ 140 ಅಕ್ಕಿ ಚೀಲಗಳ ಜೊತೆಗೆ ವಾಹನ ಕೂಡ ಜಪ್ತಿ ಮಾಡಲಾಗಿದೆ.
ಎಎಸ್‌ಐ ಭೀಮಾಶಂಕರ, ಸಿಬ್ಬಂದಿ ಪುಂಡಲೀಕ, ಗುಂಡೇರಾಯ, ಸಂಜೀವಕುಮಾರ ದಾಳಿ ನಡೆಸಿದ್ದರು. ತಹಸೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ನವೀನ ಎಂ ಅವರ ದೂರಿನ ಮೇರೆಗೆ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.