ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಬೇಕೆಂದು ದೂರಸಂಪರ್ಕ ಇಲಾಖೆ ಹ್ಯಾಂಡ್‌ಸೆಟ್ ತಯಾರಕರಿಗೆ ಸೂಚಿಸಿದೆ.
ಆ್ಯಪ್ ಇನ್‌ಸ್ಟಾಲ್ ಮಾಡಲು 90 ದಿನಗಳ ಗಡುವು ನೀಡಲಾಗಿದ್ದು ಅದನ್ನು ಅನ್ ಇನ್‌ಸ್ಟಾಲ್ ಮಾಡಲು ಆಯ್ಕೆ ನೀಡಬಾರದು. ಈಗಾಗಲೆ ಬಳಕೆಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್ ನೀಡುವಾಗ ಈ ಆ್ಯಪ್ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಿದೆ. ಕೇಂದ್ರ ಸರ್ಕಾರ ಈ ಆದೇಶವನ್ನು ಸ್ಮಾರ್ಟ್‌ಫೋನ್ ತಯಾರಕರಿಗೆ ಖಾಸಗಿಯಾಗಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಏನಿದು ಪ್ರಿಲೋಡೆಡ್ ಆಪ್ ?
ಅಪ್ಲಿಕೇಶನ್‌ಗಳನ್ನು ಬಳಕೆದಾರರು ಆಂಡ್ರಾಯ್ಡ್ ಅಥವಾ ಆಪಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಆದರೆ ಪ್ರಿಲೋಡೆಡ್ ಅಪ್ಲಿಕೇಶನ್‌ಗಳು ಫೋನಿನ ಜೊತೆಗೆ ಬರುತ್ತವೆ.
ಐಫೋನ್ ಅಥವಾ ಆಂಡ್ರಾಯ್ಡ್ ಫೋನ್ ಖರೀದಿಸುವಾಗ ಆಪಲ್ ಕಂಪನಿ ಅಥವಾ ಗೂಗಲ್ ಕಂಪನಿಯ ಕೆಲವು ಅಪ್ಲಿಕೇಶನ್‌ಗಳು ಪ್ರಿಲೋಡೆಡ್ ಆಗಿ ಬರುತ್ತವೆ. ಇದರ ಜೊತೆ ಫೋನ್ ತಯಾರಕ ಕಂಪನಿಯ ಕೆಲ ಅಪ್ಲಿಕೇಶನ್‌ಗಳು ಇರುತ್ತವೆ. ಈ ಅಪ್ಲಿಕೇಶನ್‌ಗಳನ್ನು ಯಾವುದೆ ಕಾರಣಕ್ಕೂ ಅನ್ ಇನ್‌ಸ್ಟಾಲ್ ಮಾಡಲು ಸಾಧ್ಯವಾಗುವುದಿಲ್ಲ.
ಏನಿದು ಸಂಚಾರ್ ಸಾಥಿ ಆ್ಯಪ್ ?
ಮೇ 2023 ರಲ್ಲಿ ಸಂಚಾರ್ ಸಾಥಿ ಪೋರ್ಟಲ್ ತೆರೆಯಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ವರ್ಷದ ಜನವರಿಯಲ್ಲಿ ದೂರಸಂಪರ್ಕ ಇಲಾಖೆಯು ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಈ ಆ್ಯಪ್ ಬಿಡುಗಡೆ ಮಾಡಿದೆ.
ಈ ಆ್ಯಪ್ ಇನ್‌ಸ್ಟಾಲ್ ಮಾಡಿದ ಬಳಿಕ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್ ಮಾಡಬಹುದು. ಅಷ್ಟೆ ಅಲ್ಲದೆ ಈ ಫೋನ್ ದೇಶದ ಬೇರೆ ಕಡೆ ಬಳಕೆಯಾಗುತ್ತಿದ್ದರೂ ಕಾನೂನು ಸಂಸ್ಥೆಗಳಿಗೆ ಎಲ್ಲಿ ಈ ಫೋನ್ ಸಕ್ರಿಯವಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ.
ಸೈಬರ್ ಅಪರಾಧ, ನಕಲಿ ಐಇಎಂಐ ಸಂಖ್ಯೆ ಬಳಸಿ ನಡೆಸುವ ಕೃತ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಆ್ಯಪ್ ಇನ್‌ಸ್ಟಾಲ್ ಮಾಡಲು ಕಡ್ಡಾಯ ಮಾಡಿದೆ.
ಸಂಚಾರ್ ಸಾಥಿ ವೆಬ್‌ಸೈಟ್ ಪ್ರಕಾರ ಇಲ್ಲಿಯವರೆಗೆ 42.14 ಲಕ್ಷಕ್ಕೂ ಹೆಚ್ಚು ಮೊಬೈಲ್‌ಗಳನ್ನು ನಿರ್ಬಂಧಿಸಲಾಗಿದೆ ಮತ್ತು 26.11 ಲಕ್ಷಕ್ಕೂ ಹೆಚ್ಚು ಕಳೆದುಹೋದ ಅಥವಾ ಕದ್ದ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಪತ್ತೆಹಚ್ಚಲಾಗಿದೆ.
ತನ್ನ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಪರ್ಕಗಳ ಕುರಿತು ಮಾಹಿತಿ ಪಡೆಯಲು ಬಯಸುವ ವ್ಯಕ್ತಿಗಳಿಂದ 28 ಲಕ್ಷಕ್ಕೂ ಹೆಚ್ಚು ವಿನಂತಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 25 ಲಕ್ಷಕ್ಕೂ ಹೆಚ್ಚು ವಿನಂತಿಗಳನ್ನು ಪರಿಹರಿಸಲಾಗಿದೆ.
ಈ ಅಪ್ಲಿಕೇಶನ್ 1.14 ಕೋಟಿಗೂ ಹೆಚ್ಚು ನೋಂದಣಿ ಪಡೆದಿದ್ದು, ಗೂಗಲ್ ಪ್ಲೇಸ್ಟೋರ್‌ನಿಂದ 1 ಕೋಟಿಗೂ ಹೆಚ್ಚು ಡೌನ್‌ಲೋಡ್ ಮತ್ತು ಆಪಲ್ ಸ್ಟೋರ್‌ನಿಂದ 9.5 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳು ಆಗಿವೆ.