ಸುದ್ದಿ ಸಂಗ್ರಹ ಕಲಬುರಗಿ
ಯಡ್ರಾಮಿ ತಾಲೂಕಿನ ಶ್ರೀ ಕ್ಷೇತ್ರ ಕಾಕಂಟಗಿ ಸದ್ಗುರು ಶ್ರೀ ಮಲ್ಲಾರಾಧ್ಯ ಕೋರಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಇಂದು ಮೇ.16 ಮತ್ತು 17ರಂದು ಪೀಠಾಧಿಪತಿ ಡಾ. ಸಿದ್ದತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸನ್ನಿಧಿಯಲ್ಲಿ ನಡೆಯಲಿದೆ.
ಪವಾಡ ಪುರುಷ, ಲೀಲಾಮೂರ್ತಿ ಮೂರ್ತಿ ಸದ್ಗುರು ಮಲ್ಲಾರಾಧ್ಯ ಮಹಾತ್ಮಾ ಕೋರಿಸಿದ್ದೇಶ್ವರ ಜಾತ್ರೆ ಪ್ರತಿ ವರ್ಷದ ಪದ್ಧತಿಯಂತೆ ಸಹಸ್ರಾರು ಭಕ್ತರ ಮಧ್ಯೆ ಸಂಭ್ರಮದಿಂದ ನಡೆಯಲಿದೆ. ನಾಲವಾರ- ಕಾಕಂಟಗಿ ಉಭಯ ಮಠದ ಪೀಠಾಧ್ಯಕ್ಷ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬಾದಾಮಿ ಅಮಾವಾಸ್ಯೆಯಂದು ಇಂದು ರಾತ್ರಿ 8 ಗಂಟೆಗೆ ಜಾತ್ರೆ ಉದ್ಘಾಟನೆ ಮತ್ತು ಮಾಸಿಕ ಶಿವಾನುಭವ ಚಿಂತನ ನಡೆಯಲಿದೆ, ಭಕ್ತರಿಂದ ಶ್ರೀಗಳ ನಾಣ್ಯಗಳಿಂದ ತುಲಾಭಾರ ಸೇವೆ ನಡೆಯುವುದು, ಮಧ್ಯರಾತ್ರಿ ಸದ್ಭಕ್ತರ ಹರಕೆಯ ತನಾರತಿ ಉತ್ಸವ ನಾಡಿನಲ್ಲಿಯೇ ವಿಶೇಷವೆನ್ನಬಹುದಾದ ಭಕ್ತಿ ಪರಂಪರೆಯ ಶ್ರೇಷ್ಠ ಸೇವೆ ಭಕ್ತರಿಂದ ಜರುಗಲಿದೆ.
ನಾಳೆ ಮೇ.17ರಂದು ಸಂಜೆ 6 ಗಂಟೆಗೆ ಸದ್ಗುರು ಮಲ್ಲಾರಾಧ್ಯ ಕೋರಿಸಿದ್ದೇಶ್ವರ ಭವ್ಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ರಥೋತ್ಸವಕ್ಕೂ ಮುಂಚೆ ವಿಶೇಷ ಮದ್ದು ಸುಡುವ ಕಾರ್ಯಕ್ರಮ ನೆರವೇರಲಿದೆ, ರಥೋತ್ಸವದ ನಂತರ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಾತ್ರಾ ಧರ್ಮಸಭೆ, ತುಲಾಭಾರ ಸೇವೆ ಮತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪವಾಡಪುರುಷ ಸದ್ಗುರು ಶ್ರೀ ಮಲ್ಲಾರಾಧ್ಯರು ಮತ್ತು ಕೋರಿಸಿದ್ಧೇಶ್ವರ ಶಿವಯೋಗಿಗಳು ಲೋಕಸಂಚಾರಗೈಯುತ್ತಾ ನಾಡಿನ ವಿವಿಧ ಭಾಗಗಳಲ್ಲಿ ಸಂಚರಿಸಿ, ಹಲವಾರು ಪವಾಡಗಳ ಮೂಲಕ ಜನಮನ ಉದ್ಧರಿಸಿದ ಮಹಾತ್ಮರಾಗಿದ್ದು, ಶ್ರೀಕ್ಷೇತ್ರ ಕಾಕಂಡಗಿಯಲ್ಲಿ ಹಲವು ಪವಾಡಗಳನ್ನು ಗೈದು ಗ್ರಾಮಸ್ಥರಿಗೆ ಸಂಕಷ್ಟದಿಂದ ಪಾರು ಮಾಡಿದ್ದರು.
ಹಲವು ದಶಕಗಳ ಕಾಲ ತಂಗಿ, ತಪಗೈದ ಲಿಂಗೈಕ್ಯವಾದ ಶ್ರೀಕ್ಷೇತ್ರ ಕಾಕಂಟಗಿ ಗ್ರಾಮದಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ಜಾತ್ರೆ 11 ದಿನಗಳಿಂದ ಪಂ ಶ್ರೀ ಅಮರಯ್ಯ ಶಾಸ್ತ್ರಿಗಳು ಎರಡೋಣಿ ಅವರಿಂದ ಶ್ರೀಕ್ಷೇತ್ರ ರಟಕಲ್ ರೇವಣಸಿದ್ದೇಶ್ವರ ಪುರಾಣ ಪ್ರವಚನ ನಡೆದುಕೊಂಡು ಬರುತ್ತಿದೆ, ಕಲ್ಲಯ್ಯ ಸ್ವಾಮಿ ಪಡದಲ್ಲಿ ಮತ್ತು ರಾಜಶೇಖರ್ ಗೆಜ್ಜೆ ಸಂಗೀತ ಸೇವೆ ನಡೆಯಲಿದೆ.
ಜಾತ್ರಾ ಕಾರ್ಯಕ್ರಮದಲ್ಲಿ ಹರ-ಗುರು- ಚರಮೂರ್ತಿಗಳು, ರಾಜಕೀಯ ಧುರೀಣರು, ಕವಿ-ಕಲಾವಿದರು ಭಾಗವಹಿಸಲಿದ್ದಾರೆ.
ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.