‘ನಮ್ಮ ಕಲಬುರಗಿ ಸಾರಿಗೆ’ ಆ್ಯಪ್‌ ನಿಷ್ಕ್ರಿಯ, ಪ್ರಯಾಣಿಕರಿಗೆ ತೊಂದರೆ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಪರಿಚಯಿಸಲಾಗಿದ್ದ ‘ನಮ್ಮ ಕಲಬುರಗಿ ಸಾರಿಗೆ’ ಆ್ಯಪ್ ನಿಷ್ಕ್ರಿಯಗೊಂಡಿರುವುದರಿಂದ ಪ್ರಯಾಣಿಕರು ಮತ್ತೆ ಅನಿಶ್ಚಿತತೆಯಲ್ಲೆ ಬಸ್‌ಗಾಗಿ ಕಾಯುವಂತಾಗಿದೆ.

ನಗರದ ಸಾರ್ವಜನಿಕ ಸಾರಿಗೆಯನ್ನು ಆಧುನಿಕರಿಸಿ, ಪ್ರಯಾಣಿಕರ ಪ್ರಯಾಣ ಸುಗಮಗೊಳಿಸಲು 2024ರ ಮಾರ್ಚ್‌ 5ರಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ‘ನಮ್ಮ ಕಲಬುರಗಿ ಸಾರಿಗೆ’ ಆ್ಯಪ್‌ ಆರಂಭಿಸಿತ್ತು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿತ್ತು. ಒಟ್ಟು 66,383 ಬಳಕೆದಾರರು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಆದರೆ ಕಳೆದ ಕೆಲವು ತಿಂಗಳಿಂದ ಈ ಆ್ಯಪ್‌ ನಿಷ್ಕ್ರಿಯಗೊಂಡಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ.

ಬಸ್‌ ಎಲ್ಲಿದೆ, ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ, ನಿಲ್ದಾಣಕ್ಕೆ ಇನ್ನೆಷ್ಟು ಸಮಯದಲ್ಲಿ ಬರಲಿದೆ ಎಂಬ ಮಾಹಿತಿ ಹಾಗೂ ಮಾರ್ಗ ಮತ್ತು ವೇಳಾಪಟ್ಟಿಯನ್ನು ಮೊಬೈಲ್‌ನಲ್ಲೆ ಪಡೆಯಲು ಈ ಆ್ಯಪ್‌ ನೆರವಾಗುತ್ತಿತ್ತು. ಆದರೆ ಕೆಲವು ದಿನಗಳಿಂದ ಆ್ಯಪ್‌ ತೆರೆದರೆ ‘ಸರ್ವರ್ ಬ್ಯುಸಿ’ ಅಥವಾ ‘ಸರ್ವರ್‌ನಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ’ ಎಂಬ ಸಂದೇಶ ಬರುತ್ತಿದ್ದು, ಜಿಪಿಎಸ್‌ ಆಧಾರಿತ ಬಸ್‌ಗಳ ಮಾಹಿತಿ ಲಭ್ಯವಾಗುತ್ತಿಲ್ಲ.

ಆ್ಯಪ್‌ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರು ಬಸ್‌ನ ಚಲನವಲನ ಗಮನಿಸಿ, ಅಗತ್ಯ ಸಮಯಕ್ಕೆ ನಿಲ್ದಾಣ ತಲುಪುತ್ತಿದ್ದರು. ಇದೀಗ ಆ ಸೌಲಭ್ಯ ಇಲ್ಲದಿರುವುದರಿಂದ ಬಸ್‌ ಬರುವ ಸಮಯದ ಖಚಿತ ಮಾಹಿತಿ ಇಲ್ಲದೆ ಮುಂಚಿತವಾಗಿ ನಿಲ್ದಾಣಕ್ಕೆ ತೆರಳಿ ಕಾಯಬೇಕಾಗಿದೆ. ಕೆಲವರು ತಡವಾಗಿ ಬಂದು ಬಸ್‌ ತಪ್ಪಿಸಿಕೊಳ್ಳುವ ಪರಿಸ್ಥಿತಿಯೂ ಎದುರಾಗಿದೆ.

ವಿಶೇಷವಾಗಿ ಪ್ರತಿದಿನ ಬಸ್‌ ಅವಲಂಬಿಸಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಹಿರಿಯ ನಾಗರಿಕರಿಗೆ ಇದರಿಂದ ತೊಂದರೆಯಾಗಿದೆ. ಬಸ್‌ ತಪ್ಪಿದರೆ ಮುಂದಿನ ಬಸ್‌ ಯಾವಾಗ ಎಂಬ ಮಾಹಿತಿ ಕೂಡ ಸುಲಭವಾಗಿ ಸಿಗದಿರುವುದು ಪ್ರಯಾಣಿಕರ ಆತಂಕ ಹೆಚ್ಚಿಸಿದೆ.

ನಗರದಲ್ಲಿ ಸುಮಾರು 150 ನಗರ ಸಾರಿಗೆ ಬಸ್‌ ನಿತ್ಯ ಕಾರ್ಯಚರಣೆ ಮಾಡುತ್ತಿದ್ದು, ಅಂದಾಜು 60 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ.

ತರಗತಿ, ಕಚೇರಿಗೆ ತಡ: ಆ್ಯಪ್‌ನಲ್ಲಿ ಬಸ್‌ನ ನಿಖರ ಚಲನವಲನ ಕಾಣಿಸುತ್ತಿದ್ದಾಗ ಪ್ರಯಾಣವನ್ನು ಅದಕ್ಕೆ ತಕ್ಕಂತೆ ಯೋಜಿಸಬಹುದಾಗಿತ್ತು. ಈಗ ಬಸ್‌ಗಾಗಿ ಹೆಚ್ಚು ಸಮಯ ಕಾಯಬೇಕಾಗಿರುವುದರಿಂದ ಕಚೇರಿಗೆ ತಡವಾಗುವ ಸಮಸ್ಯೆ ಎದುರಾಗುತ್ತಿದೆ ಎಂದು ಪ್ರಯಾಣಿಕ ಸಂತೋಷ ಚಿಂಚೋಳಿ ಅಸಮಾಧಾನ ವ್ಯಕ್ತಪಡಿಸಿದರು.

‘ಆ್ಯಪ್‌ ನಂಬಿಕೊಂಡು ಕಾಲೇಜಿಗೆ ಹೊರಡುತ್ತಿದ್ದೆವು. ಈಗ ಬಸ್‌ ಎಲ್ಲಿದೆ ಎಂಬುದೇ ಗೊತ್ತಾಗುವುದಿಲ್ಲ. ಬಸ್‌ ತಪ್ಪಿದರೆ ತರಗತಿ ತಪ್ಪುತ್ತದೆ. ಅಲ್ಲದೆ ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತಿದೆ’ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಹಲವಾರು ಬಾರಿ ಬಸ್‌ಗಾಗಿ ಕಾದು ಸಾಕಾಗಿ, ಆಟೊದಲ್ಲಿ ಕುಳಿತಾಗ ಬಸ್‌ ಬರುತ್ತದೆ. ಆಗ ಹಣ ವ್ಯರ್ಥವಾಯಿತು ಎಂದು ಬೇಜಾರಾಗಿದೆ. ಹೀಗಾಗಿ ಮೊದಲಿನಂತೆ ಆ್ಯಪ್‌ ಸಕ್ರಿಯಗೊಂಡರೆ ವಿದ್ಯಾರ್ಥಿಗಳ ಹಣ ವ್ಯರ್ಥವಾಗಿ ಪೋಲಾಗುವುದು ನಿಲ್ಲಲಿದೆ’ ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿಗಳು.

ಅನುದಾನ ಸ್ಥಗಿತ: ಆ್ಯಪ್ ನಿಷ್ಕ್ರಿಯ
ಜರ್ಮನ್ ಮೂಲದ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಯಾದ ಜಿಐಝಡ್, ಐಐಐಟಿ ದೆಹಲಿ ಸಹಯೋಗದೊಂದಿಗೆ ‘ನಮ್ಮ ಕಲಬುರಗಿ ಸಾರಿಗೆ’ ಆ್ಯಪ್‌ ಅಭಿವೃದ್ಧಿಪಡಿಸಿ, ಕೆಕೆಆರ್‌ಟಿಸಿ ಸಂಸ್ಥೆಗೆ ಉಚಿತವಾಗಿ ನೀಡಿತ್ತು. ಆದರೆ ಜಿಐಝಡ್‌ನಿಂದ ಅನುದಾನ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಆ್ಯಪ್‌ ನಿಷ್ಕ್ರಿಯಗೊಂಡಿದೆ. ಆ್ಯಪ್‌ ಮತ್ತೆ ಸಕ್ರಿಯಗೊಳಿಸುವಂತೆ ಜಿಐಝಡ್‌ಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೆ ಪ್ರಯೋಜನವಾಗಿಲ್ಲ’ ಎಂದು ಕೆಕೆಆರ್‌ಟಿಸಿ ಮುಖ್ಯ ತಾಂತ್ರಿಕ ಎಂಜಿನಿಯರ್ ಸಂತೋಷ್ ಗೋಗೆರಿ ತಿಳಿಸಿದರು.

ಹೀಗಾಗಿ ಕೆಕೆಆರ್‌ಟಿಸಿ ವತಿಯಿಂದಲೆ ಹೊಸ ಆ್ಯಪ್‌ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ಕುರಿತು ಮಾತುಕತೆಗಳು ಪ್ರಾಥಮಿಕ ಹಂತದಲ್ಲಿದ್ದು, ಶೀಘ್ರದಲ್ಲೆ ನೂತನ ಆ್ಯಪ್‌ ಸಾರ್ವಜನಿಕ ಸೇವೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *