ಮರಕ್ಕೆ ಕಾರು ಡಿಕ್ಕಿ: ದಸ್ತಾಪುರ ಗ್ರಾಮದ ಇಬ್ಬರು ಸಾವು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಾಳಗಿ
ತಾಲೂಕಿನ ವಚ್ಚಾ–ಮತ್ತಿಮೂಡ ಕ್ರಾಸ್ ನಡುವಿನ ರಾಜ್ಯ ಹೆದ್ದಾರಿ ಪಕ್ಕದ ಮರವೊಂದಕ್ಕೆ ಕಾರು ಡಿಕ್ಕಿಯಾಗಿ ಒಳಗಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಒಬ್ಬ ಗಾಯಗೊಂಡಿದ್ದಾನೆ.

ಕಾರಿನೊಳಗಿದ್ದ ಮೂವರು ಚಿಂಚೋಳಿ ತಾಲೂಕಿನವರಾಗಿದ್ದು, ದಸ್ತಾಪುರ ಗ್ರಾಮದ ಶಿವರಾಜ ಮಾರುತಿ ಓಂಕಾರ (24), ಅಣವಾರ ಗ್ರಾಮದ ಸಚಿನ ರಾಮಲಿಂಗ (30) ಮೃತರು. ಹೂವಿನಬಾವಿ (ಬಾಪುನಗರ) ಗ್ರಾಮದ ಶ್ರೀಕಾಂತ ಸುರೇಶ ಗಾಯಾಳು.

ಕಾರು ಮರಕ್ಕೆ ಡಿಕ್ಕಿ ಹೊಡೆದ ಭೀಕರತೆ ಎಷ್ಟಿತ್ತೆಂದರೆ ಕಾರಿನ ಹಿಂಭಾಗದ ಚಕ್ರಗಳು ನೇತಾಡುತ್ತಿದ್ದವು. ಎಷ್ಟೊ ಸಮಯದ ವರೆಗೆ ಒಬ್ಬ ವ್ಯಕ್ತಿಯ ಶವ ಕಾರಿನಲ್ಲೆ ಉಳಿದಿತ್ತು. ನಂತರ ಕಾರನ್ನು ಹಿಂದಕ್ಕೆ ಎಳೆದು ದೇಹವನ್ನು ಹೊರಗೆ ತರಲಾಯಿತು.

ಮರಣೋತ್ತರ ಪರೀಕ್ಷೆಗಾಗಿ ಕಲಬುರಗಿ ಜಿಮ್ಸ್ ಶವಾಗಾರಕ್ಕೆ ಮೃತದೇಹಗಳನ್ನು ಸಾಗಿಸಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಗೌರಿಶಂಕರ ನಾಗಣ್ಣ ಚೆನ್ನೂರ ಎಂಬುವವರಿಗೆ ಸೇರಿದ್ದು, ಕೋರವಾರ ಕಡೆಗೆ ಸಂಚರಿಸುತ್ತಿತ್ತು ಎನ್ನಲಾಗಿದೆ.

ಜಿಲ್ಲಾ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಮಾಡಬೂಳ ಪಿಎಸ್ಐ ಗೌತಮ ಗುತ್ತೇದಾರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *