ಸುದ್ದಿ ಸಂಗ್ರಹ ಬಾಗಲಕೋಟೆ
ಶಾಲಾ ಶಿಕ್ಷಕ ಮಕ್ಕಳಿಗೆ ಪಾಠ ಮಾಡುವಾಗ ಕೊಠಡಿಯ ಮೇಲ್ಛಾವಣಿಯ ಕಾಂಕ್ರೀಟ್ ದಿಢೀರ್ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ದಿನನಿತ್ಯದಂತೆ ತರಗತಿ ನಡೆಯುತ್ತಿದ್ದಾಗ ಮೇಲ್ಛಾವಣಿಯ ಪ್ಲಾಸ್ಟರಿಂಗ್ ಮತ್ತು ಕಾಂಕ್ರೀಟ್ ಚೂರುಗಳು ಏಕಾಏಕಿ ಮಕ್ಕಳ ಮೇಲೆ ಬಿದ್ದಿವೆ. ಘಟನೆಯಿಂದ ನಾಲ್ವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಶಾಲಾ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು, ಕಾಂಕ್ರೀಟ್ ಕಿತ್ತುಬಂದು ಒಳಭಾಗದ ಕಬ್ಬಿಣದ ಸರಳುಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಜೀವಭಯದಲ್ಲೆ ನಿತ್ಯ ಮಕ್ಕಳು ತರಗತಿಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಶಾಲಾ ಕಟ್ಟಡ ಅತ್ಯಂತ ದುಃಸ್ಥಿತಿಯಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ, ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ದುರಸ್ತಿಗೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕಟ್ಟಡವನ್ನು ನವೀಕರಿಸಬೇಕು ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.