ಆಟೊ-ಲಾರಿ ಡಿಕ್ಕಿ: ಮೂರು ತಿಂಗಳ ಮಗು, ತಾಯಿ ಸಾವು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ವಾಡಿ
ಕಲಬುರಗಿ–ಗುತ್ತಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಹಲಕರ್ಟಿ ಬಳಿ ಬುಧವಾರ ಆಟೊ–ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಮೂರು ತಿಂಗಳ ಮಗು ಹಾಗೂ ತಾಯಿ ಮೃತಪಟ್ಟಿದ್ದಾರೆ.

ವಾಡಿ ಪಟ್ಟಣದ ಕಲಕಮ್ಮ ಬಡಾವಣೆ ನಿವಾಸಿ ಶರಣಮ್ಮ ಶರಣು ಸಿಂಘೆ(30) ಮತ್ತು ಅವರ ಪುತ್ರ ರಾಘವೇಂದ್ರ ಸಿಂಘೆ ಮೃತರು. ಸಾಬಮ್ಮ ದತ್ತು ಸಿಂಘೆ ಮತ್ತು ಆಟೊ ಚಾಲಕ ಖಾಜಾಪಟೇಲ್ ಗಂಭೀರವಾಗಿ ಗಾಯಗೊಂಡಿದ್ದಾರೆ.

3 ತಿಂಗಳ ಹಿಂದೆ ಸಿಜೇರಿಯನ್ ಮಾಡಿಕೊಂಡಿದ್ದ ಶರಣಮ್ಮ, ಹೊಲಿಗೆ ಬಿಚ್ಚಿಸಿಕೊಂಡು ಬರಲು ಮಗು ಮತ್ತು ಅತ್ತೆಯೊಂದಿಗೆ ಯಾದಗಿರಿ ಆಸ್ಪತ್ರೆಗೆ ತೆರಳಿದ್ದರು. ಆಟೊದಲ್ಲಿ ವಾಪಸ್‌ ಬರುವಾಗ ಹಲಕರ್ಟಿ ಸಮೀಪ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಶರಣಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಮಗುವನ್ನು ಮತ್ತು ಗಾಯಾಳು ಸಾಬಮ್ಮ ಅವರನ್ನು ವಾಡಿ ಮುಖಂಡ ವಿಠ್ಠಲ್ ವಾಲ್ಮೀಕ್ ನಾಯಕ ತಮ್ಮ ಕಾರಿನಲ್ಲಿ ಕರೆದುಕೊಂಡು ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ನೆರವಾದರೂ ಮಗು ಬದುಕುಳಿಯಲಿಲ್ಲ.

ರಾಷ್ಟ್ರೀಯ ಹೆದ್ದಾರಿ ಒಂದು ಬದಿ ದುರಸ್ತಿ ಕಾಮಗಾರಿ ನಡೆಯುತ್ತಿತ್ತು. ಇನ್ನೊಂದು ಬದಿಯ ರಸ್ತೆ ಮೇಲೆ ಎರಡು ವಾಹನಗಳು ಏಕಕಾಲಕ್ಕೆ ಬಂದಿದ್ದರಿಂದ ಪರಸ್ಪರ ಡಿಕ್ಕಿಯಾಗಿ ಅನಾಹುತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಟೊ ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ವಾಡಿ ಪಿಎಸ್ಐ ತಿರುಮಲೇಶ ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾಡಿ– ನಾಲವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಪದೆ ಪದೆ ಅಪಘಾತಗಳು ಜರುಗುತ್ತಿದ್ದು ಮೇ 23ರಂದು ಲಾರಿ–ಕ್ರೂಸರ್ ಮಧ್ಯೆ ಡಿಕ್ಕಿ ಸಂಭವಿಸಿ ಇಂಗಳಗಿ ಗ್ರಾಮದ ಒಂದೆ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದರು.

Leave a Reply

Your email address will not be published. Required fields are marked *