ಸುದ್ದಿ ಸಂಗ್ರಹ ಕೊಪ್ಪಳ
ನೆರೆಯ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಹಕ್ಕಿ ಜ್ವರದ ಪ್ರಕರಣ ಧೃಡಪಟ್ಟಿರುವ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿ ಸುರೇಶ ಬಿ ಇಟ್ನಾಳ್ ಸೂಚನೆ ನೀಡಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕೋಳಿ ಶೀತ ಜ್ವರದ ರೋಗೋದ್ರೇಕದ ಕುರಿತು ಮುಂಜಾಗ್ರತೆ ಆಯೋಜಿಸಲಾಗಿದ್ದು ಜಿಲ್ಲಾ ಮಟ್ಟದ ಪ್ರಾಣಿ ಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೋಳಿ ಫಾರಂ ಮಾಲೀಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 25 ಮೊಟ್ಟೆ ಉತ್ಪಾದನಾ ಕೋಳಿ ಫಾರಂಗಳು ಹಾಗೂ 14 ಮಾಂಸ ಉತ್ಪಾದನಾ ಕೋಳಿ ಫಾರಂಗಳು ಕಾರ್ಯನಿರ್ವಹಿಸುತ್ತಿದ್ದು, ಕೋಳಿ ಶೀತ ಜ್ವರ ಹರಡುವಿಕೆ ತಡೆಯಲು ತೀವ್ರ ನಿಗಾವಹಿಸುವುದು ಅತ್ಯಗತ್ಯವಾಗಿದೆ. ಪಕ್ಕದ ರಾಜ್ಯದಲ್ಲಿ ರೋಗೋದ್ರೇಕ ಕಂಡುಬಂದಿರುವುದರಿಂದ, ಜಿಲ್ಲೆಯ ಪಶುವೈದ್ಯಕೀಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಮತ್ತು ಕೋಳಿ ಫಾರಂ ಮಾಲೀಕರು ಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕೋಳಿಗಳಲ್ಲಿ ಅಸಹಜ ಸಾವಿನ ಪ್ರಕರಣಗಳು ಕಂಡುಬಂದರೆ ತಕ್ಷಣವೆ ಹತ್ತಿರದ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ರೋಗಪೀಡಿತ ಕೋಳಿಗಳನ್ನು ಆರೋಗ್ಯಕರ ಕೋಳಿಗಳಿಂದ ಬೇರ್ಪಡಿಸುವುದು ಮತ್ತು ಸತ್ತ ಕೋಳಿಗಳನ್ನು ಸುರಕ್ಷಿತವಾಗಿ ಹೂತು ಹಾಕುವ ಕ್ರಮ ಅನುಸರಿಸುವುದು ಕಡ್ಡಾಯವಾಗಿದೆ. ಜನವಸತಿ ಪ್ರದೇಶದಿಂದ ಕೋಳಿ ಫಾರಂಗಳು ದೂರವಿಡುವುದು ಹಾಗೂ ಜನರು ಕೋಳಿ ಮತ್ತು ಅದರ ಉತ್ಪನ್ನಗಳು ಮುಟ್ಟಿದ ನಂತರ ಸಾಬೂನಿನಿಂದ ಕೈ ತೊಳೆಯುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಕನಿಷ್ಠ 70 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ, ಸೇವಿಸುವುದರಿಂದ ಯಾವುದೆ ಸೋಂಕಿನ ಅಪಾಯ ತಪ್ಪಿಸಬಹುದು. ಸಾರ್ವಜನಿಕರು ಯಾವುದೆ ರೀತಿಯ ಆತಂಕಕ್ಕೊಳಗಾಗದೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಿದರು.
ಗ್ರಾಮಗಳಲ್ಲಿ ಕೋಳಿಗಳು ಅಥವಾ ವಲಸೆ ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯ ಇಲಾಖೆಗೆ ಮಾಹಿತಿ ನೀಡಬೇಕು. ಕೆರೆ, ಕಟ್ಟೆ, ನದಿ ಹಾಗೂ ನೀರಿನ ತೊರೆಗಳಲ್ಲಿ ಸತ್ತ ಪಕ್ಷಿಗಳು ಕಂಡುಬಂದರೆ ಕೂಡಲೆ ವರದಿ ಮಾಡಬೇಕು ಎಂದರು.
.ಗ್ರಾಮ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿ, ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಹಕ್ಕಿ ಜ್ವರ ಅನುಮಾನ ಉಂಟಾದಲ್ಲಿ 24 ಗಂಟೆಗಳೊಳಗೆ ಪಶುವೈದ್ಯರ ತಂಡಗಳನ್ನು ರಚಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಹಿಕ್ಕೆ, ರಕ್ತ ಹಾಗೂ ಸತ್ತ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್ನ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗ ಸಂಶೋಧನಾ ಸಂಸ್ಥೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.