ಸುದ್ದಿ ಸಂಗ್ರಹ ಬೆಂಗಳೂರು
ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ನಗರೀಕರಣದಿಂದಾಗಿ ಕೆಲವೊಮ್ಮೆ ಕಾಡು ಪ್ರಾಣಿಗಳು ನಾಡಿಗೆ ಪ್ರವೇಶಿಸುತ್ತವೆ. ವಿಶೇಷವಾಗಿ ದಕ್ಷಿಣ ಬೆಂಗಳೂರು ಹಾಗೂ ಮಾಗಡಿ ರಸ್ತೆಯಂತಹ ಪ್ರದೇಶಗಳಲ್ಲಿ ಚಿರತೆಗಳು ಆಗಾಗ್ಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ನಿದರ್ಶನಗಳಿವೆ. ಇಂತಹ ಸಂದರ್ಭಗಳಲ್ಲಿ ಅರಣ್ಯ ಇಲಾಖೆಯು ಸ್ಥಳದಲ್ಲೇ ಬೋನುಗಳು ಇರಿಸಿ ಪ್ರಾಣಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ನಡೆಸುತ್ತದೆ. ಸದ್ಯ ಬೆಂಗಳೂರಿನ ಬಿಇಎಲ್ ಲೇಔಟ್ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿರುವುದು ತಾಜಾ ಉದಾಹರಣೆಯಾಗಿದೆ.
ಬೆಂಗಳೂರಿನ ಬ್ಯಾಡ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್ ನಲ್ಲಿ ನಿನ್ನೆ ರಾತ್ರಿ ಚಿರತೆ ಕಾಣಿಸಿಕೊಂಡು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಚಿರತೆ ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಸೆರೆಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಎದ್ನೋ ಬಿದ್ನೋ ಅಂತ ಓಡಿದ ಜನ
ಬ್ಯಾಡರಹಳ್ಳಿ ಬಳಿಯ ಭಾರತ್ ನಗರದಲ್ಲಿ ಚಿರತೆ ಕಾಣಸಿಕೊಂಡಿದೆ, ಬೆಳ್ಳಂಬೆಳಗ್ಗೆ ಪಾರ್ಕ್ಗೆ ಬಂದಿದ್ದ ಜನರಿಗೆ ಚಿರತೆ ದರ್ಶನ ಕೊಟ್ಟಿದೆ. ಚಿರತೆ ಕಂಡ ಜನ ಎದ್ನೋ ಬಿದ್ನೋ ಅಂತ ಪಾರ್ಕ್ನಿಂದ ಪೇರಿ ಕಿತ್ತಿದ್ದಾರೆ.
ಬೆಳಗ್ಗಿನ ಜಾವ 3.50ರ ಸುಮಾರಿಗೆ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿದೆ, 4.30ರ ಸುಮಾರಿಗೆ ಮತ್ತೆ ಕಾಣಿಸಿಕೊಂಡಿದೆ. ಬಳಿಕ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ಚಿರತೆ ಓಡಾಟ ದೃಢವಾಗಿದೆ. ಚಿರತೆ ಪಾರ್ಕ್ನೊಳಗೆ ಹೋಗುತ್ತಿರುವ ಹಾಗೂ ರಸ್ತೆ ದಾಟುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಅರಣ್ಯ ಅಧಿಕಾರಿಗಳು ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.