ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಜನರು ಹುತಾತ್ಮರಾದರು

ನಗರದ

ಕಲಬುರಗಿ: ಎರಡು ಶತಮಾನಕ್ಕಿಂತ ಹೆಚ್ಚಿನ ಕಾಲ ಆಡಳಿತ ನಡೆಸಿದ ಬ್ರಿಟಿಷರ ಆಡಳಿತ ಕೊನೆಗಾಣಿಸಿ, ನಮ್ಮ ದೇಶದ ಸ್ವಾತಂತ್ರ್ಯ ಪಡೆಯಲು ಅಸಂಖ್ಯಾತ ಮಹನೀಯರು ಪ್ರಾಣ ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗುರುವಾರ ಏರ್ಪಡಿಸಿದ್ದ ‘ಭಾರತ ಸ್ವಾತಂತ್ರ್ಯದ ಯಶೋಗಾಥೆ’ ಎಂಬ ವಿಶೇಷ ಉಪನ್ಯಾಸ ನೀಡಿದ ಅವರು, ಹೋರಾಟದ ಪ್ರತಿಫಲವಾಗಿ ನಾವಿಂದು ಸ್ವಾತಂತ್ರ್ಯಯುತ ಜೀವನ ಸಾಗಿಸುತ್ತಿದ್ದು, ಇತಿಹಾಸ ಅರಿತರೆ, ಇತಿಹಾಸ ಸೃಷ್ಟಿಸಲು ಸಾಧ್ಯ. ದೇಶದ ಸ್ವತಂತ್ರ್ಯ ಮೌಲ್ಯಗಳು, ಹೋರಾಟಗಾರರ ಕೊಡುಗೆ ಮರೆಯದೆ, ದೇಶದ ರಕ್ಷಣೆಗೆ ಶ್ರಮಿಸಬೇಕಾಗಿದೆ ಎಂದರು.

ಜಗತ್ತಿನ ನಾಗರಿಕತೆ ಉದಯಿಸುವುದಕ್ಕಿಂತಲೂ ಮೊದಲೇ ನಮ್ಮ ದೇಶದಲ್ಲಿ ವಿಶ್ವವಿದ್ಯಾಲಯಗಳು ಇದ್ದವು. ನಮ್ಮ ದೇಶ ಸಂಸ್ಕೃತಿ, ಪರಂಪರೆಯ ವಿಶ್ವದ ತವರೂರು. ಕಳೆದ 79 ವರ್ಷಗಳಲ್ಲಿ ಸಾಕಷ್ಟು ಸಾಧನೆಯಾಗಿದೆ. ಇನ್ನೂ ಸಾಧಿಸಬೇಕಾದ್ದು ಕೂಡಾ ಇದೆ. ದೇಶದ ಸ್ವಾತಂತ್ರ್ಯ ಶತಮಾನೋತ್ಸವ ವರ್ಷವಾದ 2047ರ ವೇಳೆಗೆ ‘ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ದೇಶದ ದೃಷ್ಟಿಕೋನ, ಕಾರ್ಯಕ್ಕೆ ದೇಶದ ಸಮಸ್ತ ನಾಗರಿಕರು ಕೈಜೋಡಿಸಬೇಕಾಗಿದೆ. ಸ್ವಾತಂತ್ರ್ಯ ದಿನಾಚರಣೆಯು ಐತಿಹಾಸಿಕ ವಿಜಯ, ಅನೇಕರ ಬಲಿದಾನವನ್ನು ನೆನಪಿಸಿಕೊಡುತ್ತದೆ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನವನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ದೇಶದ ಸಮಗ್ರ ಇತಿಹಾಸವನ್ನು ಅರಿಯಬೇಕು. ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ, ನಿಮಗಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಉನ್ನತವಾದ ಸಾಧನೆಯನ್ನು ಮಾಡಿ, ದೇಶದ ಕೀರ್ತಿ ಬಾನೆತ್ತರಕ್ಕೆ ಹೆಚ್ಚಿಸುವ ಕಾರ್ಯ ಮಾಡಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕಿಯರಾದ ಪ್ರಿಯಾಂಕಾ ಪಿ.ಕೆ., ವರ್ಷಾರಾಣಿ, ಖಮರುನ್ನಿಸಾ ಬೇಗಂ, ಸರಸ್ವತಿ ಎಲ್.ನೆಲ್ಲೂರ್, ಪ್ರೀತಿ ಜಿ., ಪ್ರೀತಿ ಆರ್.ಎಸ್. ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *