ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಾದಕ ವ್ಯಸನದಿಂದ ದೂರವಿರಿ: ಪಿಎಸ್ಐ ರೇಣುಕಾ ಉಡಗಿ‌

ತಾಲೂಕು

ಸುದ್ದಿ ಸಂಗ್ರಹ ಶಹಾಬಾದ್
ದೇಶದ ನಿಜವಾದ ಸಂಪತ್ತೆಂದರೆ ಅದು ಮಾನವ ಸಂಪತ್ತು, ಎಲ್ಲಾ ಸಂಪನ್ಮೂಲಗಳು ಇದ್ದೂ ಉತ್ತಮ ಆರೋಗ್ಯಯುತ ಮಾನವ ಸಂಪನ್ಮೂಲ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಾದಕ ವ್ಯಸನದಿಂದ ದೂರವಿರಿ ಎಂದು ವಾಡಿ ಕ್ರೈಂ ಪಿಎಸ್ಐ ರೇಣುಕಾ ಉಡಗಿ ಹೇಳಿದರು.

ತಾಲೂಕಿನ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ‘ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ’ದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಓದುವಂತಹ ವಯಸ್ಸಿನಲ್ಲಿ ಚಟಗಳಿಗೆ ದಾಸರಾಗಿ ಅಮೂಲ್ಯವಾದ ಬದುಕನ್ನು ಹಾಳುಮಾಡಿಕೊಳ್ಳಬೇಡಿ. ಬದುಕು ನಾಶಮಾಡುವ ಮಾದಕ ವ್ಯಸನಗಳಿಂದ ದೂರವಿರಿ. ಉತ್ತಮರ ಸಂಗ ಮಾಡಿ. ಉತ್ತಮ ಹವ್ಯಾಸ ಬೆಳಸಿಕೊಳ್ಳಿ ಪೌಷ್ಟಿಕ ಆಹಾರ ಸೇವಿಸಿ ಶೈಕ್ಷಣಿಕ ಬದುಕನ್ನು ಯಶಸ್ವಿಗೊಳಿಸಿಕೊಳ್ಳಬೇಕು ಎಂದರು.‌

ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಹಂತದಲ್ಲಿ ಮಕ್ಕಳು ವಿವಿಧ ವ್ಯಸನಗಳಿಗೆ ಬಲಿಯಾಗುತ್ತಿರುವುದು ದುರಂತ ಇಂತಹ ವ್ಯಸನಗಳ ವಿರುದ್ಧ ಪ್ರತಿಯೊಬ್ಬರೂ ಹೋರಾಟ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ. ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.

ಶಿಕ್ಷಕ ಸಿದ್ದಲಿಂಗ ಬಾಳಿ ವ್ಯಸನಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಪೇದೆಗಳಾದ ರಾಜೇಶ್ವರಿ, ಶಿವಪ್ಪ, ಆರೀಫ್ ಸೇರಿದಂತೆ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *