ಚಿತ್ತಾಪುರ: ಕರ್ತವ್ಯ ಪಾಲನೆ ಮಾಡುವಲ್ಲಿ ನಿರ್ಲಕ್ಷತನ, ಬೇಜವಾಬ್ದಾರಿತನ ಕಂಡುಬಂದಿರುವ ಪ್ರಯುಕ್ತ ಅಳ್ಳೊಳ್ಳಿ ಗ್ರಾಮ ಪಂಚಾಯತ ಪ್ರಭಾರಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್’ಸಿಂಗ್ ಮೀನಾ ಆದೇಶಿಸಿದ್ದಾರೆ.
ಮಾಹಿತಿ ಹಕ್ಕು ಅಧಿನಿಯಮದಡಿ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರ ಅವರು ಅರ್ಜಿ ಸಲ್ಲಿಸಿ ಮಾಹಿತಿ ಕೇಳಿರುವ ಪ್ರಯುಕ್ತ ಅಳ್ಳೊಳ್ಳಿ ಪ್ರಭಾರಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅವರು ಕರೆ ಮಾಡಿ, ಬ್ಲಾಕಮೇಲ್ ಮಾಡಲು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಹಾಕಿದ್ದಿ, ನಿನ್ನನ್ನು ಪೋಲಿಸ್ ಕೇಸ್ ಮಾಡಿ ಒಳಗೆ ಹಾಕಿಸುತ್ತೆನೆ ಎಂದು ಬೆದರಿಕೆ ಹಾಕಿದ್ದಾರೆ. ನನಗೆ ಬಿಪಿ ಇದೆ ತುಂಬಾ ಭಯಗೊಂಡಿರುವೆ, ನನ್ನ ಜೀವಕ್ಕೆ ಎನಾದರೂ ಹಾನಿಯಾದರೆ ಪಿಡಿಒ ಅವರೆ ಜವಾಬ್ದಾರರಾಗಿರುತ್ತಾರೆ. ಹೀಗಾಗಿ ಪಿಡಿಒ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರು ಮನವಿ ಸಲ್ಲಿಸಿದ್ದರು.
ತಾ.ಪಂ ಕಾರ್ಯನಿರ್ವಹಾಕಾಧಿಕಾರಿ ಅವರು ಪಿಡಿಒ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್ಗೆ ಯಾವುದೆ ಉತ್ತರ ನೀಡದ ಪ್ರಯುಕ್ತ ಹಾಗೂ ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿರುವ ಮಾಹಿತಿ ಒದಗಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಕಾರಣಕ್ಕೆ ಜಿಲ್ಲಾ ಪಂಚಾಯತ ಸಿಇಒ ಅವರು ಗ್ರಾಮ ಪಂಚಾಯತ ಪ್ರಭಾರಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಪಿಡಿಒ ಅವರ ಮೂಲ ಕಾರ್ಯಸ್ಥಾನ ಮೊಗಲಾ ಗ್ರಾ.ಪಂ, ಆದರೆ ಅವರನ್ನು ಅಳ್ಳೊಳ್ಳಿ ಗ್ರಾಪಂ ಹಾಗೂ ಕೊಲ್ಲೂರ ಗ್ರಾ.ಪಂ ಪ್ರಭಾರಿ ಪಿಡಿಒ ಸ್ಥಾನಕ್ಕೆ ನಿಯೋಜಿಸಲಾಗಿತ್ತು.