ವಾಡಿ ಪುರಸಭೆ: ಹಣಕಾಸಿನ ಅವ್ಯವಹಾರ, ತನಿಖೆಗೆ ಆಗ್ರಹ

ಪಟ್ಟಣದ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಪುರಸಭೆಯ ಹಣಕಾಸು ವರ್ಷ 2024-25ರ ಅಧಿಕೃತ ಆಡಿಟ್ ವರದಿಯಲ್ಲಿ ತೀವ್ರ ಆಘಾತಕಾರಿ ಸಂಗತಿ ಮತ್ತು ನಿಯಮಬಾಹಿರವಾಗಿ ಆರ್ಥಿಕ ನಡವಳಿಕೆ ಪತ್ತೆಯಾಗಿವೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆರೋಪಿಸಿ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರು.

ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯಾದ ‘ರಿತೇಶ್ ಗಾಂಧಿ ಅಂಡ್ ಅಸೋಸಿಯೇಟ್ಸ್’ ನಡೆಸಿರುವ ಶಾಸನಬದ್ಧ ಆಡಿಟ್ ವರದಿಯ ಪ್ರಕಾರ ಉಲ್ಲೇಖಿತ ದಾಖಲೆಗಳು ಮತ್ತು ಸಾರ್ವಜನಿಕ ಹಣದ ದುರುಪಯೋಗ ಮತ್ತು ಆಡಳಿತಾತ್ಮಕ ವೈಫಲ್ಯ ಎದ್ದುಕಾಣುತ್ತಿದೆ. ಆಡಿಟ್ ವರದಿಯಲ್ಲಿ ಪತ್ತೆಯಾದ ಗಂಭೀರ ಲೋಪದೋಷಗಳನ್ನು ವಿವರಿಸಿದರು.

2024-25ರ ಆಡಿಟ್ ಸಮಯದಲ್ಲಿ ಹೆಚ್ಚಿನ ಲೆಡ್ಜರ್‌ಗಳಲ್ಲಿ ಕಂಡುಬಂದ ಬಾಕಿ ಹಣವನ್ನು ಯಾವುದೆ ಸಮರ್ಥ ದಾಖಲೆಗಳು, ಅನುಮೋದನೆಗಳು, ವರ್ಕಿಂಗ್ ಶೀಟ್‌ಗಳು ಅಥವಾ ಸಮನ್ವಯ ಹೇಳಿಕೆಗಳಿಲ್ಲದೆ ನೇರವಾಗಿ ‘ಫಂಡ್ ಬ್ಯಾಲೆನ್ಸ್’ಗೆ ವರ್ಗಾಯಿಸಿ ರದ್ದುಗೊಳಿಸಲಾಗಿದೆ . ಈ ಕಾರಣದಿಂದಾಗಿ ಆಡಿಟರ್‌ಗಳು ಹಣಕಾಸು ಹೇಳಿಕೆಯ ನಿಖರತೆಯ ಬಗ್ಗೆ ಅಭಿಪ್ರಾಯ ನೀಡಲು ನಿರಾಕರಿಸಿದ್ದಾರೆ, ಆಸ್ತಿ ತೆರಿಗೆ, ನೀರಿನ ಶುಲ್ಕ ಮತ್ತು ವ್ಯಾಪಾರ ಪರವಾನಗಿ ಶುಲ್ಕಗಳ ಸುಮಾರು 2ಕೋಟಿಗೂ ಅಧಿಕ ಬಾಕಿ ಮೊತ್ತವನ್ನು ವೈಯಕ್ತಿಕವಾಗಿ ನಿರ್ವಹಿಸುವಲ್ಲಿ ಪುರಸಭೆ ಸಂಪೂರ್ಣವಾಗಿ ವಿಫಲವಾಗಿದೆ. 2014 ರಿಂದಲೂ ಬಾಕಿ ಇರುವ ಆಸ್ತಿ ತೆರಿಗೆ ಮತ್ತು 2007 ರಿಂದ ಬಾಕಿ ಇರುವ ನೀರಿನ ಶುಲ್ಕಗಳ ನಿಖರವಾದ ಟ್ರ್ಯಾಕಿಂಗ್ ವ್ಯವಸ್ಥೆ ಇಲ್ಲದಿರುವುದು ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದರು.

ಕೋಟ್ಯಂತರ ರೂ ಮುಂಗಡ ಹಣದ ತನಿಖೆಯಾಗದೆ ಬಾಕಿ ನಿಯಮಗಳ ಉಲ್ಲಂಘನೆ ಮಾಡಿ ನೌಕರರು, ಗುತ್ತಿಗೆದಾರರು ಮತ್ತು ಇತರ ಏಜೆನ್ಸಿಗಳಿಗೆ ನೀಡಲಾದ ಕೋಟ್ಯಂತರ ರೂ ಮುಂಗಡ ಹಣ ದೀರ್ಘಕಾಲದಿಂದ ವಸೂಲಾಗದೆ ಉಳಿದಿದೆ. ಹಬ್ಬದ ಮುಂಗಡ, ವಾಹನ ಮುಂಗಡ ಮತ್ತು ಸಿಬ್ಬಂದಿ ಪ್ರವಾಸ ಮುಂಗಡಗಳು ವರ್ಷಗಳಿಂದ ಇತ್ಯರ್ಥವಾಗದೆ ಸುಮಾರು 92ಲಕ್ಷ ರೂ ಬಾಕಿ ಉಳಿದಿರುವುದು ಹಣಕಾಸು ನಿಯಂತ್ರಣದ ಸಂಪೂರ್ಣ ವೈಫಲ್ಯ ತೋರಿಸುತ್ತದೆ ಎಂದರು.

KMBA ನಿಯಮಗಳು 2006ರ ನಿಯಮ 28 ಮತ್ತು AS 10ರ ಪ್ರಕಾರ ಪುರಸಭೆಯು ತನ್ನ ಒಡೆತನದ ಯಾವುದೆ ಸ್ಥಿರ ಆಸ್ತಿಗಳ ಸಮರ್ಪಕ ವಿವರ ಹೊಂದಿರುವ ರಿಜಿಸ್ಟರ್ ಅನ್ನು ನಿರ್ವಹಿಸುತ್ತಿಲ್ಲ ಹಾಗೂ ಯಾವುದೆ ಭೌತಿಕ ಪರಿಶೀಲನೆ ನಡೆಸಿಲ್ಲ ಎಂದು ಆಡಿಟರ್ ಆಕ್ಷೇಪಿಸಿದ್ದನ್ನು ಸಂಪೂರ್ಣ ಮಾಹಿತಿ ಹಂಚಿಕೊಂಡರು.‌‌

ಸರ್ಕಾರದಿಂದ ಮಂಜೂರಾದ ವಿವಿಧ ಅನುದಾನಗಳು ಮತ್ತು ಮೀಸಲು ನಿಧಿಗಳ ಬಳಕೆಯ ಪ್ರಮಾಣಪತ್ರ ಪರಿಶೀಲನೆಗೆ ಒದಗಿಸದ ಕಾರಣ, ಈ ಹಣವು ನಿಗದಿತ ಉದ್ದೇಶಕ್ಕಾಗಿಯೇ ಬಳಕೆಯಾಗಿದೆಯೇ ಅಥವಾ ದುರುಪಯೋಗವಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗದಿರವುದು ಕಾಣಬಹುದು ಎಂದರು.

ಸಾರ್ವಜನಿಕರ ತೆರಿಗೆ ಹಣದ ಈ ಭಾರಿ ಬೇಜವಾಬ್ದಾರಿತನ ಹಾಗೂ ಆಡಿಟ್‌ನಲ್ಲಿ ಪತ್ತೆಯಾಗಿರುವ ಆರ್ಥಿಕ ಲೋಪಗಳ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಮತ್ತು ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾ ಗೋಷ್ಠಿಯ ಮೂಲಕ ಆಗ್ರಹಿಸಿದ್ದಾರೆ.

ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ಜಿಲ್ಲಾ ರೈತ ಮೂರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ ರಾಠೋಡ, ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಪುರಸಭೆ ಮಾಜಿ ಸದಸ್ಯರಾದ ಹರಿ ಗಲಾಂಡೆ, ಕಿಶನ ಜಾಧವ, ಮುಖಂಡರಾದ ಶರಣಗೌಡ ಚಾಮನೂರ, ಅರ್ಜುನ ಕಾಳೆಕರ, ರಿಚರ್ಡ್ ಮಾರೆಡ್ಡಿ, ಬಸವರಾಜ ಕಿರಣಗಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *