ಸುದ್ದಿ ಸಂಗ್ರಹ ಕಲಬುರಗಿ
ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಸಕಾಲಕ್ಕೆ ನೀಡುವಲ್ಲಿ ನಿರ್ಲಕ್ಷ ತೋರಿದ ರಾಯಚೂರು ಜಿಲ್ಲೆಯ ಸಿರವಾರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ್ದ ಮೂವರು ಪಿಎಸ್ಐಗಳಿಗೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ ವೆಂಕಟಸಿಂಗ್ ಅವರು ದಂಡ ವಿಧಿಸಿ ಆದೇಶಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನಂತೆ ಠಾಣೆಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹ ಮಾಡದ ಕಾರಣ ಮೂವರು ಪಿಎಸ್ಐಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.
ಏನಿದು ಪ್ರಕರಣ ?
ರಾಯಚೂರು ಜಿಲ್ಲೆಯ ಸಿರಿವಾರ ಪೊಲೀಸ್ ಠಾಣೆಗೆ ಪವನಕುಮಾರ ಎಂಬುವರು 2022ರ ಜೂನ್ 4ರಂದು ಮಾಹಿತಿ ಹಕ್ಕು ಅಧಿನಿಯಮ 2005ರ 6(1) 7(1) 7(2)ರಡಿ ಅರ್ಜಿ ಸಲ್ಲಿಸಿ, 2022ರ ಜೂನ್ 1ರಿಂದ ರಾತ್ರಿ 7.45ರಿಂದ ರಾತ್ರಿ 11:50ರ ವರೆಗಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ನೀಡುವಂತೆ ಕೋರಿದ್ದರು.
ಮೇಲ್ಮನವಿದಾರರು ಕೋರಿದ ಮಾಹಿತಿ, ಮಾಹಿತಿ ಹಕ್ಕು ಅಧಿನಿಯಮ 2005ರ 6(1) 7(1) 7(2)ರ ಪ್ರಕಾರ ಜೀವ ಮತ್ತು ಸ್ವತಂತ್ರಕ್ಕೆ ಸಂಬಂಧಿಸಿದ್ದು, ಅದನ್ನು 48 ಗಂಟೆಯೊಳಗೆ ಒದಗಿಸಬೇಕಿತ್ತು. ಆದರೆ, ಮೇಲ್ಮನವಿದಾರ ಅರ್ಜಿ ಸಲ್ಲಿಸಿದ ಎರಡು ತಿಂಗಳ ಬಳಿಕ ಅಂದರೆ 2022ರ ಆಗಸ್ಟ್ 13ರಂದು ಆಗಿನ ಪಿಎಸ್ಐ ಗೀತಾಂಜಲಿ ಸಿಂದೆ ಅವರು ತಾವು ಕೋರಿದ ಮಾಹಿತಿ ಹಕ್ಕು ಅಧಿನಿಯಮ 8(1) (ಜೆ)ಗೆ ಸಂಬಂಧಿಸಿದೆ ಎಂದು ಹಿಂಬರಹ ನೀಡಿದ್ದರು.
ತಾವು ಕೋರಿದ ಸಕಾಲಕ್ಕೆ ನೀಡದ ಕಾರಣ ಮೇಲ್ಮನವಿದಾರರು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದಲ್ಲಿ ಸಲ್ಲಿಸಿದ ದ್ವಿತೀಯ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಪೀಠವು ಮೇಲ್ಮನವಿದಾರರು ಕೋರಿದ ಸಿಸಿಟಿವಿ ದೃಶ್ಯಾವಳಿ ಒದಗಿಸುವಂತೆ ಆದೇಶ ನೀಡಿತ್ತು. ಅದಾಗ್ಯೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೀಡಿರಲಿಲ್ಲ. ಆಯೋಗದ ಆದೇಶ ಪಾಲಿಸದ ಕಾರಣ ಆ ಅವಧಿಯಲ್ಲಿ ಪಿಎಸ್ಐಗಳಾಗಿ ಕಾರ್ಯನಿರ್ವಹಿಸಿದ ಗೀತಾಂಜಲಿ ಸಿಂದೆ, ಅವಿನಾಶ ಕಾಂಬಳೆ, ಮತ್ತು ಗುರುಚಂದ್ರ ಯಾದವ ಅವರಿಗೆ ಅನುಕ್ರಮವಾಗಿ 25 ಸಾವಿರ, 15 ಸಾವಿರ ಮತ್ತು 25 ಸಾವಿರ ದಂಡ ವಿಧಿಸಿತ್ತು. ಆದರೆ ಪ್ರತಿವಾದಿ ಪಿಎಸ್ಐಗಳು ದಂಡ ಪಾವತಿ ಮಾಡಿದರೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ನೀಡಿರಲಿಲ್ಲ. ಹೀಗಾಗಿ ಈ ಮೂವರು ಪಿಎಸ್ಐಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಯುಕ್ತ ಬಿ.ವೆಂಕಟಸಿಂಗ್ ಶಿಫಾರಸು ಮಾಡಿ ಆದೇಶಿಸಿದ್ದಾರೆ.
ಬಳಿಕ ಸಿರವಾರ ಪೊಲೀಸ್ ಠಾಣೆಗೆ ಪಿಎಸ್’ಐ ಆಗಿ ಸೇವೆಗೆ ಬಂದ ಪಿಎಸ್’ಐ ಬಸನಗೌಡ ಮೇಲ್ಮನವಿದಾರರು ಕೋರಿದ ಸಿಸಿಟಿವಿ ದೃಶ್ಯಾವಳಿ ನೀಡಲು ಅನುಕೂಲವಾಗುವಂತೆ ರೀಟ್ರಿವ್ ಮಾಡಲು ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಕೋರಿದ ಹಿನ್ನೆಲೆಯಲ್ಲಿ 2025ರ ಜನವರಿ 2ರಂದು ಸಿರವಾರ ಠಾಣೆಗೆ ಆಗಮಿಸಿದ ತಾಂತ್ರಿಕ ತಂಡ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹ ಇರುವ ಹಾರ್ಡ್ ಡಿಸ್ಕ್ ಪರಿಶೀಲನೆ ಮಾಡಲಾಗಿ, ಸದರಿ ಹಾರ್ಡ್ ಡಿಸ್ಕ್‌ನಲ್ಲಿ ಕೇವಲ 15 ತಿಂಗಳ ಸಿಸಿಟಿವಿ ದೃಶ್ಯಾವಳಿ ಮಾತ್ರ ಸಂಗ್ರಹವಿದ್ದು, ಅದಕ್ಕಿಂತ ಮೊದಲಿನ ದೃಶ್ಯಾವಳಿ ಸಂಗ್ರಹವಿಲ್ಲ ಎಂದು ಮೇಲ್ಮನವಿದಾರರಿಗೆ ಹಿಂಬರಹ ನೀಡಿದ್ದರು.
ಹೀಗಾಗಿ ಮೇಲ್ಮನವಿದಾರರು ಕೋರಿದ ಮಾಹಿತಿ ಸಕಾಲಕ್ಕೆ ನೀಡದೆ ಇರುವುದು ಸೇರಿದಂತೆ ಸುಪ್ರೀಂ ಕೋರ್ಟ್ ಎಸ್’ಎಲ್’ಪಿ (ಕ್ರಿಮಿನಲ್) ನಂ.3543/2020ರ ಆದೇಶ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ ಪ್ರತಿವಾದಿ ಪಿಎಸ್ಐಗಳಾಗಿದ್ದ ಗೀತಾಂಜಲಿ ಸಿಂದೆ, ಅವಿನಾಶ ಕಾಂಬಳೆ, ಮತ್ತು ಗುರುಚಂದ್ರ ಯಾದವ ಅವರ ವಿರುದ್ಧ ಕೆಸಿಎಸ್’ಆರ್ ನಿಯಮದಂತೆ ಅನ್ವಯವಾಗುವ ಶಿಸ್ತುಕ್ರಮ ಕೈಗೊಳ್ಳುವಂತೆ ಆಯೋಗವು ಶಿಫಾರಸು ಮಾಡಿದೆ.
ಅಲ್ಲದೆ ಪೊಲೀಸ್ ಕಾಯ್ದೆ ನಿಯಮ 7 (ರೂಲ್-7)ರ ಪ್ರಕಾರ ನೋಟಿಸ್ ಜಾರಿ ಮಾಡಿ ಈ ಕೈಗೊಂಡ ಕ್ರಮ ಪಾಲನಾ ವರದಿ ನೀಡುವಂತೆ ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಆಯೋಗ ಆದೇಶ ನೀಡಿದೆ.
ಮುಂದುವರಿದ ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಇರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಲು ಅಗತ್ಯವಾದ ಸಂಗ್ರಹ ಸಾಮರ್ಥ್ಯದ ಹಾರ್ಡ್ ಡಿಸ್ಕ್ ಮತ್ತು ಸಿಸಿಟಿವಿಗಳು ಕಾರ್ಯನಿರ್ವಹಿಸುವಂತೆ ಸುಸ್ಥಿತಿಯಲ್ಲಿ ಇಟ್ಟು 18 ತಿಂಗಳ ಕಾಯ್ದಿರಿಸುವಂತೆ ಕ್ರಮ ಕೈಗೊಳ್ಳಲು ರಾಜ್ಯ ಡಿಜಿ ಮತ್ತು ಐಜಿ ಎಂ.ಎಸ್ ಸಲೀಂ ಅವರಿಗೆ ಆಯೋಗವು ಸೂಚಿಸಿದೆ.