ಪ್ರವಾಹ ಪೀಡಿತ ಹಳೆ ಹೆಬ್ಬಾಳ ಗ್ರಾಮದ ಜನರ ಸಮಸ್ಯೆ ಆಲಿಸಿದ ಸಚಿವ ಪ್ರಿಯಾಂಕ್ ಖರ್ಗೆ

ತಾಲೂಕು

ಚಿತ್ತಾಪುರ: ಮಳೆ ಹಾಗೂ ಪ್ರವಾಹ ಪೀಡಿತ ಹಳೆ ಹೆಬ್ಬಾಳ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ನಿರಂತರ ಸುರಿವ ಮಳೆಯ ಮಧ್ಯೆಯೇ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ತಾಲೂಕಿನ ಹಳೆ ಹೆಬ್ಬಾಳ ಗ್ರಾಮದಲ್ಲಿ ಮಳೆಯಿಂದ ಬಿದ್ದ ಮನೆಯನ್ನು ಪರಿಶೀಲಿಸಿ ಹಾನಿಗೊಳಗಾದ ಮನೆಗಳ ಸರ್ವೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಳೆ ಹೆಬ್ಬಾಳ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರು ಸಚಿವರ ಮುಂದೆ ಬೇಡಿಕೆ ಇರಿಸಿದರು. ಗ್ರಾಮಸ್ಥರಿಗೆ ಸ್ಪಂದಿಸಿದ ಸಚಿವರು ಮಳೆ ತುಸು ಕಡಿಮೆಯಾದ ನಂತರ ಗ್ರಾಮಕ್ಕೆ ಭೇಟಿ ನೀಡಿ ಬೇಡಿಕೆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು. ಗ್ರಾಮದ ಸ್ಥಳಾಂತರಕ್ಕೆ ಮುಂದಾಗಿರುವುದಾಗಿ ಹೇಳಿದ ಸಚಿವರು, ಎಷ್ಟು ಕುಟುಂಬಗಳು ಸ್ಥಳಾಂತರಗೊಳ್ಳಬೇಕು ಎನ್ನುವ ಬಗ್ಗೆ ತೀರ್ಮಾನಿಸುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.

ಗ್ರಾಮಸ್ಥರೊಂದಿಗೆ ಗ್ರಾಮಸಭೆ ನಡೆಸುವಂತೆ ಸ್ಥಳದಲ್ಲಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮತ್ತು ಉಪವಿಭಾಗಾಧಿಕಾರಿ ಸಾಹಿತ್ಯ ಆಲದಕಟ್ಟಿ ಅವರಿಗೆ ಸೂಚಿಸಿದರು. ಗ್ರಾಮಸ್ಥರಿಗೆ ಬೇಕಾಗುವ ಸೌಲಭ್ಯ ಒದಗಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.

ನಿರಂತರ ಮಳೆಯಿಂದ ಬೆಣ್ಣೆತೊರಾ ಜಲಾಶಯದಿಂದ ನೀರು ಹರಿಬಿಟ್ಟಿದ್ದರಿಂದ ಹಳೆ ಹೆಬ್ಬಾಳ ಗ್ರಾಮಕ್ಕೆ ನೀರು ನುಗ್ಗಿರುವುದರಿಂದ ಗ್ರಾಮಸ್ಥರನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಕಣಸೂರು ಗ್ರಾಮಕ್ಕೆ ಭೇಟಿ
ಬೆಣ್ಣತೊರಾ ನದಿಯ ನೀರಿನಿಂದ ಪ್ರವಾವಕ್ಕೀಡಾಗಿರುವ ಕಾಳಗಿ ತಾಲೂಕಿನ ಕಣಸೂರು ಗ್ರಾಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಗ್ರಾಮ ಸ್ಥಳಾಂತರದ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ನಂತರ ಸಚಿವರು ಚಿತ್ತಾಪುರ ಮತಕ್ಷೇತ್ರದ ಗುಂಡಗುರ್ತಿ (ತಾಯಿ ರಾಧಾಬಾಯಿ ಖರ್ಗೆ ಅವರ ತವರುಮನೆ) ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದರು.

Leave a Reply

Your email address will not be published. Required fields are marked *