ಗೂಗಲ್‌ ಮ್ಯಾಪ್‌ ನಂಬಿ ಕೆಟ್ಟ ಕೇರಳದ ಪ್ರವಾಸಿಗರು: ಉಪ್ಲಾಡಿ ಹೊಳೆಯತ್ತ ಸಾಗಿದ ಕಾರು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕೋಟ
ಗೂಗಲ್‌ ಮ್ಯಾಪ್‌ ಎಡವಟ್ಟಿನಿಂದ ಕಾರೊಂದು ಹೊಳೆಗೆ ಬೀಳುವ ಸ್ಥಿತಿಗೆ ತಲುಪಿದ ಘಟನೆ ಶುಕ್ರವಾರ ರಾತ್ರಿ ಕೋಟ ಸಾೖಬ್ರಕಟ್ಟೆ ಮುಖ್ಯ ರಸ್ತೆಯ ಉಪ್ಲಾಡಿ ಹೊಳೆ ಬದಿಯಲ್ಲಿ ಸಂಭವಿಸಿದೆ.

ಕೇರಳ ಮೂಲದ ಕುಟುಂಬವೊಂದು ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದರು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುತ್ತಿದ್ದ ವೇಳೆ ಗೂಗಲ್‌ ಮ್ಯಾಪ್‌ನಲ್ಲಿ ತೋರಿದ ಡೈವರ್ಶನ್‌ ಅನುಸರಿಸಿ ಬ್ರಹ್ಮಾವರ ಬಳಿ ಬಾರಕೂರು ಮಾರ್ಗವಾಗಿ ಸಾೖಬ್ರಕಟ್ಟೆ ಮೂಲಕ ಕೋಟದತ್ತ ಸಾಗಿತ್ತು.

ಉಪ್ಲಾಡಿ ಹೊಳೆ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ಹೊಳೆ ಬದಿಯ ಸಿಮೆಂಟ್‌ ಪಿಲ್ಲರ್‌ ಮೇಲೆ ಹತ್ತಿ ನಿಂತಿದೆ. ಹೊಳೆಗೆ ಕೇವಲ ಒಂದು ಅಡಿ ಅಂತರದಲ್ಲಿ ಕಾರು ನಿಂತಿದ್ದರಿಂದ ಭಾರಿ ದುರಂತ ತಪ್ಪಿದಂತಾಗಿದೆ. ಕಳೆದ ವರ್ಷ ನವಿ ಮುಂಬೈನಲ್ಲಿ ಗೂಗಲ್ ಮ್ಯಾಪ್ ನಂಬಿಕೊಂಡು ಕಾರಿನೊಂದಿಗೆ ಕಂದಕಕ್ಕೆ ಬಿದ್ದ ಮಹಿಳೆ ಘಟನೆ ಇಲ್ಲಿ ಉಲ್ಲೇಖಿಸಬಹುದು.

ಕಾರಿನಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 6 ಜನ ಪ್ರಯಾಣಿಸುತ್ತಿದ್ದರು, ಅದೃಷ್ಟವಶಾತ್‌ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಕೋಟ ಪೊಲೀಸ್‌ ಸಿಬ್ಬಂದಿ ರಾಘವೇಂದ್ರ, ಆಂಬ್ಯುಲೆನ್ಸ್‌ ಚಾಲಕ ಕಿಶೋರ್‌ ಶೆಟ್ಟಿ ಅವರು ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

2024ರಲ್ಲಿ ಕೇರಳದ ಕೊಟ್ಟಾಯಂನಲ್ಲಿ ಗೂಗಲ್‌ ಮ್ಯಾಪ್‌ ಅವಾಂತರದಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದೊಳಕ್ಕೆ ಇಳಿದ ಪ್ರವಾಸಿಗರ ಕಾರಿನ ಘಟನೆ ಇಲ್ಲಿ ಉದಾಹರಣೆಯಾಗಿ ಕೊಡಬಹುದು.

Leave a Reply

Your email address will not be published. Required fields are marked *