ಹಾಸನ: ದೇವಾಲಯದ ಕಬ್ಬಿಣದ ಬಾಗಿಲು ತೆರೆದು ಕಲ್ಲಿನ ಗಣೇಶ ಮೂರ್ತಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬೇಲೂರು ಪುರಸಭೆ ಆವರಣದ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ಕೈಂಕರ್ಯಗಳು ನಡೆಯುತ್ತವೆ. ಪ್ರತಿನಿತ್ಯ ವ್ಯಾಪಾರಿಗಳು ಬೆಳಗ್ಗೆ ಗಣೇಶ ಮೂರ್ತಿಗೆ ಕೈಮುಗಿದು ವ್ಯಾಪಾರ ಆರಂಭಿಸುತ್ತಾರೆ. ಶನಿವಾರ ರಾತ್ರಿ ಪುರಸಭೆ ಗೇಟ್‌ಗೆ ಬೀಗ ಹಾಕಿಕೊಂಡು ತೆರಳಿದ್ದರು. ಇಂದು ಬೆಳಗ್ಗೆ ಭಕ್ತಾಧಿಗಳು ಕೈಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ.
ಗೇಟ್ ತೆಗೆದು ದೇವರಿಗೆ ಚಪ್ಪಲಿ ಹಾರ ಹಾಕಿರುವ ದುರುಳರ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋಮು ಸೌಹಾರ್ದ ಕದಡಲು ಕೆಲವು ಕಿಡಿಗೇಡಿಗಳಿಂದ ಇಂತಹ ದುಷ್ಕೃತ್ಯ ಎಸಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.