ಸಾಮಾಜಿಕ ಸುಧಾರಣೆಗೆ ಅಲ್ಲಮಪ್ರಭುಗಳ ಕೊಡುಗೆ ಅನನ್ಯ

ಜಿಲ್ಲೆ

ಕಲಬುರಗಿ: ಸಾಮಾಜಿಕ ಸಮಾನತೆಯ ನಿರ್ಮಾಣಕ್ಕೆ ಶ್ರಮಿಸಿದ ಶರಣ ಅಲ್ಲಮಪ್ರಭು ಅವರ ಕೊಡುಗೆ ಅನನ್ಯ ಎಂದು ಶರಣ ಚಿಂತಕ ಡಾ.ರಾಜಶೇಖರ ಪಾಟೀಲ ಹೆಬಳಿ ಅಭಿಪ್ರಾಯಪಟ್ಟರು.

ನಗರದ ಡಬರಾಬಾದ ಕ್ರಾಸ್ ಸಮೀಪದ ಪ್ರಭುದೇವ ನಗರದ ಬಡಾವಣೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಶರಣ ಅಲ್ಲಮಪ್ರಭು ದೇವರ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿಯೂ ಕೂಡಾ ಕಂಡು ಬರುತ್ತಿರುವ ಜಾತಿಯತೆ, ಮೂಢನಂಬಿಕೆ, ಕಂದಾಚಾರ, ಅಂಧಶೃದ್ಧೆ ಮುಂತಾದ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಬಸವಣ್ಣನವರ ಜೊತೆಗೂಡಿ 950 ವರ್ಷಗಳ ಹಿಂದೆಯೇ ಹೋರಾಡಿದರು ಎಂದರು.

ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಮಾತನಾಡಿ, ‘ವಿಶ್ವದ ಪ್ರಥಮ ಸಂಸತ್ತು’ ಎಂದು ಕರೆಯಲ್ಪಡುವ ‘ಅನುಭವ ಮಂಟಪ’ದ ಅಧ್ಯಕ್ಷರಾಗಿ ಸಕಲ ಜಾತಿ, ಧರ್ಮ, ಜನಾಂಗದವರಿಗೆ ಸಮಾನವಾದ ಅವಕಾಶಗಳನ್ನು ಒದಗಿಸಿಕೊಟ್ಟು, ಸಮ-ಸಮಾಜ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನಿಸಿದರು. ವಚನಕಾರರ ಜೀವನ ಸಿದ್ಧಾಂತದ ಸಾರವನ್ನು ತಮ್ಮ ಇರುವಿನಲ್ಲಿರಿಸಿಕೊಂಡು ಶರಣ ಮಾರ್ಗಕ್ಕೆ ಗುರುವಾದರು. ಅಪಾರ ಜ್ಞಾನಿಗಳಾದ ಅವರು, ತಮ್ಮ ಅನುಭದಿಂದ ಸಾಮಾಜಿಕ ಕಳಕಳಿಯುಳ್ಳ ಅನೇಕ ವಚನಗಳನ್ನು ರಚಿಸಿದ್ದಾರೆ. ‘ಗುಹೇಶ್ವರಾ’ ಎಂಬ ಅಂಕಿತನಾಮದೊಂದಿಗೆ ರೂಪುಗೊಂಡ ವಚನಗಳು, ಸಮಾಜಕ್ಕೆ ದಾರಿದೀಪವಾಗಿವೆ. ಬಸವಾದಿ ಶರಣರ ವಚನಗಳನ್ನು ಎಲ್ಲರು ಅಧ್ಯಯನ ಮಾಡಿ, ಅವುಗಳ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಡಾವಣೆಯ ಅಧ್ಯಕ್ಷ ಪ್ರಭು ಪಾಣೆಗಾಂವ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ನಿವೃತ್ತ ಶಿಕ್ಷಕ ಚಂದ್ರಕಾಂತ ಬಿರಾದಾರ, ಬಡಾವಣೆಯ ಪಂಡಿತರಾವ ಪಾಟೀಲ, ಸಂಗಮೇಶ ಕಡಗಂಚಿ, ಮಲ್ಲಿಕಾರ್ಜುನ ಪಾಟೀಲ, ಮಲ್ಲಿಕಾರ್ಜುನ ಮೇತ್ರೆ, ದತ್ತು ರೇವೂರ, ಡಾ.ಬಸವರಾಜ ವಾಡಿ, ಬಸವರಾಜ ಕೊರಳ್ಳಿ, ನಾಗೇಂದ್ರಪ್ಪ ಬಿರಾದಾರ, ಸಾತಲಿಂಗಪ್ಪ ಖಸಗಿ, ಮಲ್ಲಿಕಾರ್ಜುನ ಲಿಂಗದಳ್ಳಿ, ಅಣವೀರಯ್ಯ ಮಠಪತಿ, ದುಂಡಪ್ಪ ವಗ್ಗಾಲೆ, ಆದರ್ಶ, ಪ್ರತೀಕ್, ಸಮೃದ್ಧ, ನಿತೀಶ್, ಸಾತ್ವಿಕ, ಕಾರ್ತಿಕ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *