ಬೆಂಗಳೂರು: ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ 2026ರ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಶನಿವಾರ ಪ್ರಕಟವಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಜಾಲತಾಣದಲ್ಲಿ www.kseab.karnataka.gov.in ವೇಳಾಪಟ್ಟಿ ಪ್ರಕಟಿಸಲಾಗಿದೆ. 2026ರ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿಗಳಿಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 09 ರವರೆಗೆ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಯನ್ನು ಮಂಡಲಿಯ ಇ-ಮೇಲ್ ವಿಳಾಸ: chairpersonkseab@gmail.com ಗೆ ಹಾಗೂ ಹಾರ್ಡ್ ಪ್ರತಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿಗೆ ನಿಗದಿತ ಸಮಯದೊಳಗೆ ಕಳುಹಿಸಬೇಕು. ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಬರುವ ಯಾವುದೆ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
2026ರ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ
ದ್ವಿತೀಯ ಪಿಯುಸಿ ಪರೀಕ್ಷೆ – 1ರ ತಾತ್ಕಾಲಿಕ ವೇಳಾಪಟ್ಟಿಯಂತೆ ಮೊದಲ ಪರೀಕ್ಷೆ 28 ಫೆಬ್ರವರಿ 2026 ರಂದು ನಡೆಯಲಿದೆ. ಮಾರ್ಚ್ 17 ರಂದು ಕೊನೆಯ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ – 2ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, 25 ಏಪ್ರಿಲ್ 2026 ರಂದು ಪರೀಕ್ಷೆ ಶುರುವಾಗಿ, ಮೇ 9 ರಂದು ಕೊನೆಗೊಳ್ಳಲಿದೆ.
2026ರ ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ
ಎಸ್ಎಸ್ಎಲ್ಸಿ ಪರೀಕ್ಷೆ – 1ರ ತಾತ್ಕಾಲಿಕ ವೇಳಾಪಟ್ಟಿಯಂತೆ ಪರೀಕ್ಷೆ 18 ಮಾರ್ಚ್ 2026 ರಂದು ಆರಂಭವಾಗಿ ಏಪ್ರಿಲ್ 1 ರಂದು ಕೊನೆಗೊಳ್ಳಲಿದೆ. ಎಸ್ಎಸ್ಎಲ್ಸಿ ಪರೀಕ್ಷೆ – 2ರ ತಾತ್ಕಾಲಿಕ ವೇಳಾಪಟ್ಟಿಯಂತೆ ಮೇ 18ರಂದು ಪರೀಕ್ಷೆ ಆರಂಭವಾಗಿ ಮೇ 25 ರಂದು ಕೊನೆಗೊಳ್ಳಲಿದೆ.