ನಂದಿನಿ: 20 ಉತ್ಪನ್ನಗಳ ದರ ಇಳಿಕೆ

ರಾಜ್ಯ

ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯು (ಕೆಎಂಎಫ್) ತುಪ್ಪ, ಬೆಣ್ಣೆ, ಪನೀರ್ ಸೇರಿ ‘ನಂದಿನಿ’ ಹಾಲಿನ ವಿವಿಧ ಉತ್ಪನ್ನಗಳ ದರವನ್ನು ಇಳಿಕೆ ಮಾಡಿದ್ದು, ಇದೆ ತಿಂಗಳು 22ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ.

ಶನಿವಾರ ಸುದ್ದಿಗಾರರೊಂದಿಗೆ ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ, ಹಾಲಿನ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆಯ ಪರಿಣಾಮ, ಈ ಪರಿಷ್ಕರಣೆ ಮಾಡಲಾಗಿದೆ. 1 ಲೀಟ‌ರ್ ತುಪ್ಪದ ದರ ರೂ.650 ರಿಂದ 610ಕ್ಕೆ ಇಳಿಕೆ ಮಾಡಲಾಗಿದೆ. ಇದೆ ರೀತಿ ಮೊಸರು ಹೊರತುಪಡಿಸಿ ಹಾಲಿನ ಇತರ ಉತ್ಪನ್ನಗಳ ದರ ಇಳಿಸಲಾಗಿದೆ. ಈಗಾಗಲೇ ಪೂರೈಕೆ ಆಗಿರುವ ಉತ್ಪನ್ನಗಳ ಮೇಲೆ ಹಳೆ ದರ ಇದ್ದರೂ, ಮಾರಾಟಗಾರರು ಕಡ್ಡಾಯವಾಗಿ ಪರಿಷ್ಕೃತ ದರವನ್ನು ಪಡೆಯಬೇಕು. ಈ ಇಳಿಕೆ ಮೂಲಕ ಗ್ರಾಹಕರಿಗೆ ದಸರಾ ಉಡುಗೊರೆ ನೀಡುತ್ತಿದ್ದೆವೆ ಎಂದರು.

ಜಿಎಸ್‌ಟಿ ಇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು
ಸಚಿವಾಲಯದ ಆದೇಶದ ಅನ್ವಯ, ಆಡಳಿತ ಮಂಡಳಿ ಸಭೆ ನಡೆಸಿ ಹಾಲಿನ ಉತ್ಪನ್ನಗಳ ಮೇಲಿನ ದರ
ಪರಿಷ್ಕರಿಸಿದ್ದೆವೆ. ನಂದಿನಿ ತುಪ್ಪ, ಬೆಣ್ಣೆ, ಚೀಸ್, ಕುರುಕು ತಿಂಡಿಗಳ ಮೇಲಿನ ಜಿಎಸ್‌ಟಿ ಶೇ.12 ರಿಂದ ಶೇ.5ಕ್ಕೆ, ಕುಕೀಸ್, ಚಾಕೋಲೇಟ್ಸ್‌, ಐಸ್‌ಕ್ರೀಂ, ಇನ್‌ಸ್ಟಂಟ್ ಮಿಕ್ಸ್ ಮತ್ತು ಪ್ಯಾಕ್ ನೀರಿನ ಮೇಲಿನ ಜಿಎಸ್‌ಟಿ ಶೇ.18 ರಿಂದ ಶೇ 5ಕ್ಕೆ ಇಳಿಕೆಯಾಗಿದೆ. ನಂದಿನಿ ಪನೀರ್ ಮತ್ತು ಯುಎಚ್‌ಟಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಶೇ 5ರಿಂದ ಶೂನ್ಯಕ್ಕೆ ಇಳಿಕೆಯಾಗಿದೆ. ನಂದಿನಿ ಮೊಸರಿನ ಮೇಲಿನ ಜಿಎಸ್‌ಟಿ ಈ ಮೊದಲಿನಂತೆ ಶೇ.5 ರಷ್ಟು ಇರಲಿದೆ. ಆದ್ದರಿಂದ ಮೊಸರಿನ ದರದಲ್ಲಿ ವ್ಯತ್ಯಾಸವಾಗುವುದಿಲ್ಲ.
ಹಾಲಿನ ದರವು ಈ ಮೊದಲಿನಂತೆ ಇರಲಿದೆ ಎಂದರು.

ಮಳಿಗೆಗಳಿಗೆ ದರ ಪಟ್ಟಿ: 22ರಿಂದ ಹೊಸ ದರ ಅನ್ವಯ
ಆಗುವುದರಿಂದ, ಪರಿಷ್ಕೃತ ದರದ ಪಟ್ಟಿಯನ್ನು ಮಳಿಗೆಗಳು ಹಾಗೂ ಮಾರಾಟ ವಿಭಾಗಗಳಿಗೆ ಕಳಿಸಲಾಗುತ್ತದೆ. ಮಾರಾಟ ಮಳಿಗೆಗಳ ಮುಂದೆ ಪರಿಷ್ಕೃತ ದರ ಪಟ್ಟಿ ಪ್ರದರ್ಶಿಸಲಾಗುತ್ತದೆ. ಉತ್ಪನ್ನಗಳ ಮೇಲೆ ಈ ಹಿಂದಿನ ಎಂಆರ್‌ಪಿ ಇದ್ದರೂ, ಹೊಸ ದರದಲ್ಲಿಯೇ ಮಾರಾಟ ಮಾಡಲು ಸೂಚಿಸಲಾಗಿದೆ ಎಂದರು.

Leave a Reply

Your email address will not be published. Required fields are marked *