ಶ್ರೇಷ್ಟ ಸಮಾಜ ಸುಧಾರಕ, ಮಹಾದಾಸೋಹಿ ಶರಣಬಸವೇಶ್ವರರು

ಜಿಲ್ಲೆ

ಕಲಬುರಗಿ: ಭಾರತ ಅನೇಕ ಶರಣರ, ಸಂತರ, ಅನುಭವಿಗಳ ತವರೂರು. ಕಾಲಕಾಲಕ್ಕೆ ಅನೇಕ ಮಹನೀಯರು ಜನಿಸಿ, ತಮ್ಮದೆಯಾದ ಅದ್ವೀತಿಯ ಕೊಡುಗೆ ಸಮಾಜಕ್ಕೆ ನೀಡಿದ್ದಾರೆ. ದಾಸೋಹ, ಕಾಯಕ, ಭಕ್ತಿಯನ್ನು ಗೈಯುತ್ತ, ಸಮಾಜದಲ್ಲಿರುವ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಶ್ರಮಿಸಿ, ಅಸಂಖ್ಯಾತ ಭಕ್ತರ ಆರಾಧ್ಯ ದೈವರೆನಿಸಿಕೊಂಡವರೇ ದಾಸೋಹ ಭಾಂಡಾರಿ ಶರಣಬಸವೇಶ್ವರರಾಗಿದ್ದಾರೆ.

ಶರಣಬಸವೇಶ್ವರರು ಕ್ರಿ.ಶ 1746 ರಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಆದಯ್ಯ ಮತ್ತು ಮಡಿಯಮ್ಮ ಎಂಬ ಶರಣ ದಂಪತಿಗಳ ಮಗನಾಗಿ ಜನಿಸಿದ್ದಾರೆ. ಇವರು ರಾಜ ಮನೆತನದಲ್ಲಿ ಜನಿಸಿದವರಲ್ಲ. ಪ್ರಭುತ್ವ ವ್ಯವಸ್ಥೆ, ಶ್ರೇಷ್ಠ ಅಧಿಕಾರ ಹೊಂದಿದವರಲ್ಲ. ಇವರು ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ, ಅಸಾಧಾರಣ ಸಾಧನೆ ಮಾಡಿರುವುದು ಒಂದು ವಿಶಿಷ್ಟತೆಯಾಗಿದೆ. ಕೃಷಿಯ ಬಗ್ಗೆ ಪ್ರಸ್ತುತ ದಿನಗಳಲ್ಲಿ ಅಸಡ್ಯ ತೋರುತ್ತಿರುವ ಜನತೆಗೆ ಸದಾ ಮಾದರಿಯಾಗಿದ್ದಾರೆ. ದೈವತ್ವ ಪಡೆಯಲು ಶರಣಬಸವರು ಮನೆ, ಸಂಸಾರ ಎಲ್ಲವನ್ನು ತ್ಯಜಿಸಿ, ಬೆಟ್ಟ-ಗುಡ್ಡ, ಏಕಾಂತದಲ್ಲಿ ಧ್ಯಾನ ಮಾಡಿದವರಲ್ಲ. ಇವರು ಸದಾ ಜನತೆಯ ಜೊತೆಯಲ್ಲಿಯೇ ಇದ್ದು, “ಜನಸೇವೆಯೇ ಜನಾರ್ಧನ ಸೇವೆ’ಯೆಂದು ಭಾವಿಸಿ, ಪರಹಿತದಲ್ಲಿ ಪರಶಿವನನ್ನು ಕಂಡಿದ್ದಾರೆ.

ಶರಣಬಸವೇಶ್ವರರು ಎಂದಿಗೂ ಸ್ವಜನ ಪಕ್ಷಪಾತಿಗಳಾಗಿರಲಿಲ್ಲ. ಸಮಾಜವೆ ನನ್ನ ಮನೆ, ಸಮಾಜದಲ್ಲಿರುವ ಎಲ್ಲರೂ ಸಾಕ್ಷಾತ ಶಿವನಸ್ವರೂಪಿಗಳು, ಅವರೆಲ್ಲರ ಸೇವೆಯೇ ಶಿವನ ಪೂಜೆಯೆಂದು ಸಮಾಜಕ್ಕಾಗಿ ದುಡಿದವರಾಗಿದ್ದಾರೆ. ‘ದಾಸೋಹ’ ಎಂದರೆ ಸಮನಾರ್ಥಕ ಪದ ‘ಶರಣಬಸವೇಶ್ವರ’ರಾಗಿದ್ದಾರೆ. ಕೇವಲ ಮಾನವರಿಗಷ್ಟೇ ಅಲ್ಲದೆ ಪಶು, ಪಕ್ಷಿ, ದನ-ಕರುಗಳಿಗೆ ದಾಸೋಹ ಗೈಯುವ ಮೂಲಕ, ದಾಸೋಹಕ್ಕೆ ಹೊಸ ಭಾ಼ಷೆ ಬರೆದು, ‘ದಾಸೋಹ ಭಾಂಡಾರಿ’ ಎನಿಸಿಕೊಂಡಿದ್ದಾರೆ.

ಜಾತಿಯತೆ, ಮೇಲು-ಕೀಳುಗಳಂತಹ ಭಾವನೆ ಸಮಾಜಕ್ಕೆ ಅಂಟಿರುವ ಅನಿಷ್ಠ ಪದ್ದತಿಗಳಾಗಿವೆ. ವಿಶ್ವಗುರು ಬಸವಣ್ಣನವರು ಹರಳಯ್ಯ-ಮಧು ಅರಸರ ಮಕ್ಕಳ ಅಂತರ್ಜಾತಿ ವಿವಾಹ ಮಾಡಿ ಸಾಮಾಜಿಕ ಸಮಾನತೆಗೆ ನಾಂದಿ ಹಾಡಿದಂತೆ, ಕೀಳು ಜಾತಿಯವನೆಂದು ಕಡಕೋಳ ಮಡಿವಾಳಪ್ಪನವರಿಗೆ ಲಿಂಗದೀಕ್ಷೆ ನೀಡದಿರುವ ಸಂದರ್ಭದಲ್ಲಿ ಸ್ವಂತ ಶರಣಬಸವೇಶ್ವರರು ಶಿವದೀಕ್ಷೆಯನ್ನು ಕಲ್ಪಿಸಿ, ಯಾರು ಮೇಲು-ಕೀಳಲ್ಲ. ಎಲ್ಲರೂ ಸರಿ ಸಮಾನರು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು.

ಶರಣಬಸವೇಶ್ವರಲ್ಲಿ ದಯೆ, ಶಾಂತಿ, ಸಹಾನುಭೂತಿ, ಆತ್ಮಸ್ಥೈರ್ಯ, ಧೈರ್ಯ, ಸತ್ಯನಿಷ್ಠತೆ ಹೀಗೆ ಅನೇಕ ಸದ್ಗುಣಗಳು ಅವರಲ್ಲಿದ್ದವು. ದುಷ್ಠ ಶಕ್ತಿಗಳನ್ನು ನಾಶ ಮಾಡದೆ, ಶಿಷ್ಠ ಶಕ್ತಿಗಳನ್ನಾಗಿ ಪರಿವರ್ತಿಸಿದ್ದು ಇವರ ವೈಶಿಷ್ಠತೆಯಾಗಿದೆ. ಅನೇಕ ಕ್ರೂರ ವ್ಯಕ್ತಿಗಳನ್ನು, ಒಳ್ಳೆಯ ಸತ್ಪ್ರಜೆಗಳನ್ನಾಗಿ, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವಂತೆ ಮಾಡಿದ್ದು ಇವರ ಅದ್ಭುತ ಕಾರ್ಯವಾಗಿದೆ. ಶರಣರು ಮಾಡಿರುವ ಸಮಾಜ ಸುಧಾರಣೆ ಕಂಡು ‘ಶಿವಸ್ವರೂಪಿ’ ಎಂದು ಹೇಳಲಾಗುತ್ತದೆ.

ಶರಣಬಸವೇಶ್ವರರು ದಾಸೋಹ ಕ್ರಿಯೆ ಮೂಲಕ ಸಮಾಜಕ್ಕೆ ಅಮೂಲ್ಯವಾದ ಸೇವೆ ಮಾಡಿದ್ದಾರೆ. ಅರಳುಗುಂಡಿಗೆ ಮತ್ತು ಕಲಬುರಗಿಯಲ್ಲಿ ಶಿವ ಜೀವನವನು ನಡೆಸಿದರು. ದಾಸೋಹಕ್ಕಾಗಿ ಆದಿ ದೊಡ್ಡಪ್ಪ ಅಪ್ಪರವರ ಕರುಳಿನ ಕುಡಿಯನ್ನೇ ನೀಡಿದ್ದು, ಜಗತ್ತಿನ ಇತಿಹಾಸದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ಶರಣಬಸವೇಶ್ವರರು 1822 ರಲ್ಲಿ ಲಿಂಗೈಕರಾದರು. ಇವರು ಲಿಂಗೈಕರಾಗಿ ಇಂದಿಗೂ 203 ವರ್ಷಗಳು ಗತಿಸಿವೆ. ಅವರು ದೈಹಿಕವಾಗಿ ನಮ್ಮನ್ನು ಅಗಲಿದರು ಕೂಡಾ, ಅವರ ಸೇವೆ, ಕಾಯಕ, ಭಕ್ತಿ, ದಾಸೋಹದಂತಹ ಅದ್ವಿತೀಯ ಕೊಡುಗೆ ಮೂಲಕ ಅಸಂಖ್ಯಾತ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತಿರುತ್ತಾರೆಂಬುದಕ್ಕೆ ಪ್ರತಿ ದಿನ ಅವರ ದರ್ಶನಕ್ಕೆ ಬರುವ ಸಾವಿರಾರು ಭಕ್ತರು ಮತ್ತು ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರೆ ಸಾಕ್ಷಿಯಾಗಿದ್ದಾರೆ. ಶರಣಬಸವೇಶ್ವರರು ಮಾಡಿದ ಸಮಾಜ ಸೇವೆ ಮತ್ತು ದಾಸೋಹ ಕ್ರಿಯೆಯನ್ನು ಮುಂದುವರಿಸುವ ಕಾರ್ಯ ದಾಸೋಹ ಪೀಠ ಪರಂಪರೆಯು ನಡೆಸಿಕೊಂಡು ಬರುತ್ತಿದೆ. ಪೀಠಾಧಿಪತಿಗಳಾಗಿ ಆದಿ ದೊಡ್ಡಪ್ಪ ಶರಣರು, ಎರಡನೆಯ ಶರಣಬಸವಪ್ಪ ಅಪ್ಪ, ಬಸವಣಪ್ಪ ಅಪ್ಪ, ಲಿಂಗಬಸವಪ್ಪ ಅಪ್ಪ, ಮೂರನೆಯ ಶರಣಬಸವಪ್ಪ ಅಪ್ಪ ದ್ವಿತೀಯ ದೊಡ್ಡಪ್ಪ ಅಪ್ಪ ಅವರು ಸೇವೆ ಸಲ್ಲಿಸಿದ್ದಾರೆ.

ಪರಮಪೂಜ್ಯ ದೊಡ್ಡಪ್ಪ ಅಪ್ಪ ಅವರು ಈ ಭಾಗದಲ್ಲಿ ಮಹಿಳೆಯರಿಗಾಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದಾರೆ. ಜೊತೆಗೆ ಕನ್ನಡ ಭಾಷೆಯ ಉಳಿವಿಗಾಗಿ ಪ್ರಯತ್ನಿಸಿದ್ದು, ಮರೆಯುವಂತಿಲ್ಲ. ಎಂಟನೇ ಮಹಾದಾಸೋಹ ಪೀಠಾಧಿಪತಿಗಳಾದ ಪರಮಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಚಿ.ಪೂಜ್ಯ ದೊಡ್ಡಪ್ಪ ಅಪ್ಪ ಒಂಬತ್ತನೇ ಪೀಠಾಧಿಪತಿಯಾಗಿದ್ದಾರೆ. ಮಾತೃ ಹೃದಯದ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್ ಅಪ್ಪ ಅವರು ಸಮಾಜಕ್ಕೆ ಉತ್ತಮವಾದ ಸೇವೆ ನೀಡುತ್ತಿದ್ದಾರೆ. ದಿ.18 ರಂದು ಶರಣರ ಉಚ್ಚಾಯಿ ಮತ್ತು 19 ರಂದು ಮಹಾರಥೋತ್ಸವ ಜರುಗಲಿದೆ.

ಎಚ್.ಬಿ ಪಾಟೀಲ
ಉಪನ್ಯಾಸಕರು, ಸಮಾಜ ಸೇವಕರು, ಕಲಬುರಗಿ

Leave a Reply

Your email address will not be published. Required fields are marked *