ಕಾಳಗಿ: ಬೆಣ್ಣೆತೊರಾ ಜಲಾಶಯದ ದಡದಲ್ಲಿರುವ ಕನ್ನಡಗಿ
ಗ್ರಾಮದಲ್ಲಿ ಶ್ರಾವಣ ಎರಡನೇ ಸೋಮವಾರದಂದು ಅಪಾರ ಭಕ್ತರ ಜೈಘೋಷ ಮಧ್ಯೆ ಅದ್ದೂರಿಯಾಗಿ ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.
ಬೆಳೆಗ್ಗೆ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ಜರುಗಿತು. ಮಧ್ಯಾಹ್ನ ನಂದಿಕೋಲು ಉತ್ಸವ, ಸಾಯಂಕಾಲ ಪಲ್ಲಕ್ಕಿ ಉತ್ಸವ ಡೋಲು, ಹಲಗೆ, ಪುರವಂತರ ಮೆರವಣಿಗೆ ಹಾಗೂ ಅಪಾರ ಭಕ್ತರ ಜೈ ಘೋಷಗಳ ಮಧ್ಯೆ ಸಡಗರದಿಂದ ಜರುಗಿತು. ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ದೇವಸ್ಥಾನದ ಅರ್ಚಕರಿಂದ ವಿಶೇಷ ಪೂಜೆ ನೆರವೇರಿಸಿದರು. ಹೇರೂರ (ಕೆ) ಗ್ರಾಮ ಭಜನಾ ತಂಡ ಹಾಗೂ ವಿವಿಧ ಗ್ರಾಮಗಳಿಂದ ಹಲಗೆ, ಡೊಳ್ಳು ವಾದ್ಯಗಳು ಉತ್ಸವಕ್ಕೆ ಮೆರಗು ತಂದವು. ಜಿಲ್ಲೆಯ ವಿವಿಧ ಕಡೆಯಿಂದ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಮಹಿಳೆಯರು ವಿವಿಧ ಸಾಮಾನುಗಳು, ಮಕ್ಕಳು ಆಟಿಕೆಯ ಸಾಮಾಗ್ರಿಗಳು ಖರೀದಿಸಿ, ಸಂಭ್ರಮಿಸಿದರು.
ಕಾಳಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ ಮಾಡಿದ್ದರು. ಅಸಂಖ್ಯಾತ ಭಕ್ತರು ವಾಹನಗಳೊಂದಿಗೆ ಆಗಮಿಸಿದ್ದರಿಂದ ದೇವಸ್ಥಾನದಿಂದ ಚಿಂಚೋಳಿ ಮುಖ್ಯ ರಸ್ತೆಯವರೆಗೆ 2.5 ಕಿ.ಮೀ ಸಂಪೂರ್ಣ ಟ್ರಾಫಿಕ್ ಜಾಮ್ ಕಂಡುಬಂತು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಜಿಲ್ಲೆಯ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು.