ಬೆಂಗಳೂರು: ಕರ್ನಾಟಕ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿದ್ದೆವೆ ಎಂದು ಘೋಷಿಸಿದ್ದಾರೆ.
ಒಂದು ದಿನ ಮುಷ್ಕರ ಮುಂದೂಡುವಂತೆ ಹೈಕೋರ್ಟ್ ಸೂಚನೆ ನೀಡಿದ ನಂತರವೂ ಸಾರಿಗೆ ನೌಕರರು ಮಂಗಳವಾರ ಮುಷ್ಕರ ನಡೆಸಿದರು. ಇದರಿಂದ ಗರಂ ಆದ ಹೈಕೋರ್ಟ್, ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿತು. ಮುಷ್ಕರ ನಿಲ್ಲಿಸದಿದ್ದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು. ಎಸ್ಮಾ ಕಾಯ್ದೆಯಡಿ ಸರ್ಕಾರ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು ಎಂದು ಖಡಕ್ ಎಚ್ಚರಿಕೆ ನೀಡಿತು. ಹೈಕೋರ್ಟ್ ಎಚ್ಚರಿಕೆ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರವನ್ನು ಮುಂದೂಡಿದ್ದಾರೆ.
ಹೈಕೋರ್ಟ್ ನೀಡಿದ ಸೂಚನೆ ಏನು ?
ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದು, “ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಎಜಿ ಶಶಿಕಿರಣ್ ಶೆಟ್ಟಿ: ಇಲ್ಲಿಯವರೆಗೆ ನಡೆದ ಮಾತುಕತೆಗಳ ವಿವರ ನೀಡಿದರು. ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಕಾಯ್ದೆ ಯಂತೆ ಸಂಧಾನ ಸಭೆ ನಡೆಸಲಾಗುತ್ತಿದೆ ಎಂದರು.
ಸಿಜೆ ವಿಭು ಬಕ್ರು, ನ್ಯಾ.ಸಿ.ಎಂ ಜೋಷಿ ಅವರು ವಿಭಾಗೀಯ ಪೀಠ: ಮುಷ್ಕರ ನಿಲ್ಲಿಸಲಾಗಿದೆಯೇ ಎಂದು ಪ್ರಶ್ನಿಸಿದರು ? ಮುಷ್ಕರ ನಿಂತಿರುವ ಬಗ್ಗೆ ನಾಳೆ ಮಾಹಿತಿ ನೀಡಬೇಕು. ಇಲ್ಲವಾದರೆ ನಾಳೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು. ಸಾರಿಗೆ ಸಂಘಟನೆಗಳ ಕ್ರಿಯಾ ಸಮಿತಿ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು. ನಿಮ್ಮ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಜನಸಾಮಾನ್ಯರನ್ನು ಒತ್ತೆಯಾಗಿರಿಸುವುದನ್ನು ಸಹಿಸುವುದಿಲ್ಲ. ಹೈಕೋರ್ಟ್ ಆದೇಶವಿದ್ದರೂ ನೀವು ಅದನ್ನು ಪಾಲಿಸಿಲ್ಲ. ಎಸ್ಮಾ ಕಾಯ್ದೆಯಡಿ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು ಎಂದು ಸಾರಿಗೆ ಸಂಘಟನೆಗೆ ತರಾಟೆಗೆ ತೆಗೆದುಕೊಂಡಿತು.
ಜಂಟಿ ಕ್ರಿಯಾ ಸಮಿತಿ ಪರ ವಕೀಲ: ನಾಳೆ ಮುಷ್ಕರ ನಡೆಸುವುದಿಲ್ಲ ಎಂದರು.
ವಿಭಾಗೀಯ ಪೀಠ: ಜನರಿಗೆ ನಿಮ್ಮ ಮುಷ್ಕರದಿಂದ ಸಮಸ್ಯೆ ಆಗಬಾರದು. ಎಸ್ಮಾ ಜಾರಿಯಾದರೂ ಮುಷ್ಕರ ನಡೆಸುವುದು ಕಾನೂನುಬಾಹಿರ ಎಂದು ಹೇಳಿ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್ ನೀಡಿತು. ಮುಷ್ಕರಕ್ಕೆ ನೀಡಿದ್ದ ತಡೆಯಾಜ್ಞೆ ಎರಡು ದಿನ ವಿಸ್ತರಣೆ ಮಾಡಿ ಆಗಸ್ಟ್ 7ಕ್ಕೆ ವಿಚಾರಣೆಯನ್ನು ಮುಂದೂಡಿತು.
ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿ: ಅನಂತ ಸುಬ್ಬರಾವ್
ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರವನ್ನು ಮುಂದೂಡಿದರು. ಸಾರಿಗೆ ಸಿಬ್ಬಂದಿ ಮುಷ್ಕರ ಮುಂದೂಡಿದ್ದೇವೆ. ಸಾರಿಗೆ ಸಿಬ್ಬಂದಿ ಎಲ್ಲರೂ ಈ ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಿ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದರು.
ಸರ್ಕಾರ ಕ್ರಮ ಜರುಗಿಸಬಹುದು ಅಂತ ಹೈಕೋರ್ಟ್ ಹೇಳಿದೆ: ವಕೀಲೆ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದ ವಕೀಲೆ ದೀಕ್ಷಾ ಅಮೃತೇಶ್ ಮಾತನಾಡಿ, ಕೆಎಸ್ಆರ್ಟಿಸಿ ಪರ ವಕೀಲರು ಕೇವಲ ಮೂರು ಜನ ಮಾತ್ರ ರಜೆ ಪಡೆದಿದ್ದಾರೆ ಎಂದಿದ್ದಾರೆ. ಅನಧಿಕೃತ ಪ್ರತಿಭಟನೆಯಾದಲ್ಲಿ ಕ್ರಮ ಜರುಗಿಸಬೇಕೆಂದು ಹೈಕೋರ್ಟ್ ಹೇಳಿದೆ. ಐದು ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ಮಾಡಿದ್ದಾರೆ. ಕೊಪ್ಪಳ, ಮೈಸೂರು ಸೇರಿದಂತೆ ಹಲವೆಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡದಂತೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.ಅನಧಿಕೃತ ಪ್ರತಿಭಟನೆ ಮಾಡಿದ್ದಲ್ಲಿ ಸರ್ಕಾರ ಕ್ರಮ ಜರುಗಿಸಬಹುದು ಎಂದು ಹೈಕೋರ್ಟ್ ಹೇಳಿದೆ. ಪ್ರತಿಭಟನೆಯಿಂದ ಆಸ್ಪತ್ರೆ,ಶಾಲಾ ಕಾಲೇಜು ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಹೈಕೋರ್ಟ್ ಹೇಳಿದೆ.