ಕಲಬುರಗಿ: ತೆರಿಗೆ ಪಾವತಿ ಶಿಕ್ಷೆಯಲ್ಲ, ಬದಲಿಗೆ ದೇಶದ ನಾಗರಿಕರ ಜವಾಬ್ದಾರಿಯಾಗಿದೆ. ಸರ್ಕಾರಗಳು ತೆರಿಗೆಗಳಿಂದ ಬರುವ ಆದಾಯದಿಂದ ಮೂಲಭೂತ ಸೌಕರ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಬಳಸಲಾಗುತ್ತದೆ. ರಾಷ್ಟ್ರದ ಅಭಿವೃದ್ಧಿಗೆ ತೆರಿಗೆಗಳು ಪೂರಕವಾಗಿವೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “166ನೇ ರಾಷ್ಟ್ರೀಯ ಆದಾಯ ತೆರಿಗೆ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿವರ್ಷ ‘ಜುಲೈ-24’ ರಂದು ‘ರಾಷ್ಟ್ರೀಯ ಆದಾಯ ತೆರಿಗೆ ದಿನ’ ಆಚರಿಸಲಾಗುತ್ತದೆ. ಭಾರತದಲ್ಲಿ ಆದಾಯ ತೆರಿಗೆ ಪ್ರಾರಂಭವಾದ ದಿನವಾಗಿದೆ.1860ರ ಜು.24ರಂದು ಸರ್ ಜೇಮ್ಸ್ ವಿಲ್ಸನ್ ಅವರು ಆದಾಯ ತೆರಿಗೆ ಪ್ರಾರಂಭಿಸಿದರು. ಇದು ಭಾರತದ ಆರ್ಥಿಕ ಇತಿಹಾಸದಲ್ಲಿ ಮಹತ್ವದ ತಿರುವು. ಸರ್ಕಾರವು ವ್ಯಕ್ತಿಗಳು ಮತ್ತು ವ್ಯವಹಾರಗಳು ಹಣಕಾಸು ವರ್ಷವಿಡಿ ಗಳಿಸುವ ಆದಾಯದ ಮೇಲೆ ವಿಧಿಸುವುದು ಆದಾಯ ತೆರಿಗೆಯಾಗಿದೆ. ಇದು ಸಂಬಳದಿಂದ ಬರುವ ಆದಾಯ, ಮನೆ ಆಸ್ತಿಯಿಂದ ಬರುವ ಆದಾಯ, ವ್ಯವಹಾರ ಅಥವಾ ವೃತ್ತಿಯಿಂದ ಬರುವ ಆದಾಯ, ಆಸ್ತಿ ಮತ್ತು ಆಭರಣಗಳಂತಹ ಬಂಡವಾಳ ಸ್ವತ್ತುಗಳನ್ನು ಮಾರಾಟ ಮಾಡುವ ಆದಾಯ ಅಥವಾ ಬಡ್ಡಿ ಉಳಿತಾಯ, ಕುಟುಂಬ ಪಿಂಚಣಿ, ಉಡುಗರೆ, ಲಾಟರಿ ಗೆಲುವು ಮತ್ತು ಹೂಡಿಕೆ ಆದಾಯದಂತಹ ಇತರ ಮೂಲಗಳಿಂದ ಬರುವ ಆದಾಯ ವಿವಿಧ ಮೂಲಗಳು ಒಳಗೊಂಡಿದೆ ಎಂದರು.
ತೆರಿಗೆ ಪಾವತಿಸುವುದರಿಂದ ಹಲವು ಪ್ರಯೋಜನಗಳಿವೆ. ಅವು ರಸ್ತೆಗಳಂತಹ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತವೆ ಮತ್ತು ಕಾನೂನಿನ ಆಳ್ವಿಕೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಕಾರ್ಯನಿರ್ವಹಣೆಗೆ ಅಗತ್ಯವಾದ ಸಂಸ್ಥೆಗಳು ರಚಿಸಲು ಅಥವಾ ನಿರ್ವಹಿಸಲು ಸಹ ಸಹಾಯ ಮಾಡಬಹುದು. ರಸ್ತೆಗಳು, ಶಾಲಾ ಕಟ್ಟಡಗಳು ಮತ್ತು ಆಸ್ಪತ್ರೆಗಳು ನಿರ್ಮಿಸುವುದು ಸೇರಿದಂತೆ ಸಾರ್ವಜನಿಕ ಖರ್ಚುಗಳಿಗೆ ಹಣಕಾಸು ಒದಗಿಸಲು, ಪೊಲೀಸ್ – ಅಗ್ನಿಶಾಮಕ ಇಲಾಖೆಗಳು, ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳು ಸೇರಿದಂತೆ ಸ್ಥಳೀಯ ಸರ್ಕಾರಿ ಸೇವೆಗಳಿಗೆ ಹಣಕಾಸು ಒದಗಿಸಲು ತೆರಿಗೆಗಳು ಸರ್ಕಾರದ ಆದಾಯವಾಗಿದೆ. ತೆರಿಗೆಗಳು ಸಾರ್ವಜನಿಕ ಮೂಲಸೌಕರ್ಯ ಮತ್ತು ಸೇವೆಗಳಿಗೆ ಹಣಕಾಸು ಒದಗಿಸುತ್ತವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಸ್ಥೆಯ ಶಿಕ್ಷಕರಾದ ಸೈಯದ್ ಹಮೀದ್, ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.