ಕಲಬುರಗಿ: ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ, ತತ್ವಜ್ಞಾನಿಯಾಗಿ, ಶಿಕ್ಷಣ ತಜ್ಞರಾಗಿ, ಕ್ಷಿಪಣಿಯ ರೂವಾರಿಯಾಗಿ, ಧೀಮಂತ ಧುರಿಣರಾಗಿ, ಯುವ ಜನತೆಯ ದಾರಿದೀಪವಾಗಿ, ರಾಷ್ಟ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಕೊಡುಗೆ ಅಪಾರ. ಅವರ ಮೇರು ವ್ಯಕ್ತಿತ್ವ ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯವಾದದ್ದು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಜರುಗಿದ ಡಾ.ಎ.ಪಿ.ಜೆ ಅಬ್ದುಲ್ ಕಲಾಂರ 94ನೇ ಜನ್ಮದಿನ-‘ವಿಶ್ವ ವಿದ್ಯಾರ್ಥಿಗಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಾಂ ಅವರಂತಹ ಮೇರು ವ್ಯಕ್ತಿತ್ವ ಹೊಂದಿದವರು ವಿರಳ. ಅವರಲ್ಲಿರುವ ದೇಶದ ಅಭಿವೃದ್ಧಿಯ ತುಡಿತ ನಮ್ಮೆಲ್ಲರಿಗೆ ಸದಾ ಮಾದರಿಯಾಗಿದೆ. ವಿದ್ಯಾರ್ಥಿಗಳ ಬಗ್ಗೆಯಿದ್ದ ಅವರ ಕಾಳಜಿಯಿಂದ ಅವರ ಜನ್ಮದಿನವನ್ನು ‘ವಿಶ್ವ ವಿದ್ಯಾರ್ಥಿಗಳ ದಿನಾಚರಣೆ’ಯನ್ನಾಗಿ ಆಚರಿಸುವ ಮೂಲಕ ಇಡಿ ವಿದ್ಯಾರ್ಥಿ ಸಮುದಾಯಕ್ಕೂ ಕೂಡಾ ಗೌರವ ನೀಡಿದಂತಾಗಲು ಕಲಾಂ ಅವರೇ ಕಾರಣರಾಗಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಕಲಾಂ ಅವರಂತಹ ಮಹನೀಯರ ಬಗ್ಗೆ ಅದ್ಯಯನ ಮಾಡಬೇಕು. ಕಲಾಂ ಅವರ ಒಂದೊಂದು ಮಾತುಗಳು ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿವೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ತರಬೇತಿ ಸಂಸ್ಥೆಯ ಶಿಕ್ಷಕಿಯರಾದ ಮುಸ್ಕಾನ್ ಶೇಖ್, ರುಕ್ಸಾನಾ ಪಟೇಲ್ ಮತ್ತು ವಿದ್ಯಾರ್ಥಿಗಳು ಇದ್ದರು.