ಕಲಬುರಗಿ: ಚೆಸ್ ಆಟ ಆಡುವುದರಿಂದ ಏಕಾಗ್ರತೆ, ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ಇದು ಮೆದುಳಿಗೆ ವ್ಯಾಯಾಮ ನೀಡಿ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಗುರುಲಿಂಗಯ್ಯ ಮಠ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಚೆಸ್ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ಚೆಸ್ ಎಲ್ಲಿ ಬೇಕಾದರೂ ಅಭ್ಯಾಸ ಮಾಡಬಹುದು ಮತ್ತು ಭಾಷೆ, ವಯಸ್ಸು, ಲಿಂಗ, ದೈಹಿಕ ಸಾಮರ್ಥ್ಯ ಅಥವಾ ಸಾಮಾಜಿಕ ಸ್ಥಾನಮಾನದ ಅಡೆತಡೆಗಳನ್ನು ಮೀರಿ ಎಲ್ಲರೂ ಆಡಬಹುದು ಎಂದರು.
ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, 1924 ರಲ್ಲಿ ‘ಅಂತರಾಷ್ಟ್ರೀಯ ಚೆಸ್ ಫೆಡರೇಶನ್’ ಸಂಸ್ಥೆ’ ಸ್ಥಾಪನೆಯಾದ ದಿನದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದು ವಿಶ್ವದಾದ್ಯಂತ ಚೆಸ್ ಆಟವನ್ನು ಆಯೋಜಿಸುವ ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಚೆಸ್ ಅತ್ಯಂತ ಪ್ರಾಚೀನ, ಬೌದ್ಧಿಕ ಮತ್ತು ಸಾಂಸ್ಕೃತಿಕ ಆಟಗಳಲ್ಲಿ ಒಂದಾಗಿದ್ದು, ಕ್ರೀಡೆ, ವೈಜ್ಞಾನಿಕ ಚಿಂತನೆ ಮತ್ತು ಕಲೆಯ ಅಂಶಗಳ ಸಂಯೋಜನೆಯನ್ನು ಹೊಂದಿದೆ. ಕೈಗೆಟುಕುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಚಟುವಟಿಕೆಯಾಗಿದೆ ಎಂದರು.
ಚೆಸ್ ಒಂದು ಜಾಗತಿಕ ಆಟವಾಗಿದೆ, ಇದು ನ್ಯಾಯಸಮ್ಮತ, ಒಳಗೊಳ್ಳುವಿಕೆ, ಪರಸ್ಪರ ಗೌರವವನ್ನು ಉತ್ತೇಜಿಸುತ್ತದೆ. ಈ ನಿಟ್ಟಿನಲ್ಲಿ ಇದು ಜನರು ಮತ್ತು ರಾಷ್ಟ್ರಗಳ ನಡುವೆ ಸಹಿಷ್ಣುತೆ, ತಿಳುವಳಿಕೆ ವಾತಾವರಣಕ್ಕೆ ಕೊಡುಗೆ ನೀಡುತ್ತದೆ. ಶಿಕ್ಷಣವನ್ನು ಬಲಪಡಿಸುವುದು, ಲಿಂಗ ಸಮಾನತೆ ಅರಿತುಕೊಳ್ಳುವುದು, ಮಹಿಳೆಯರು, ಬಾಲಕ ಬಾಲಕಿಯರ ಸಬಲೀಕರಣ ಮತ್ತು ಸೇರ್ಪಡೆ, ಸಹಿಷ್ಣುತೆ, ಪರಸ್ಪರ ತಿಳುವಳಿಕೆ ಮತ್ತು ಗೌರವವನ್ನು ಬೆಳೆಸುವುದು ಸೇರಿದಂತೆ 2030ರ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನದಲ್ಲಿ ಚೆಸ್ ಪ್ರಮುಖ ಅವಕಾಶಗಳನ್ನು ನೀಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಚೆಸ್ ಆಟವು ಮಕ್ಕಳಲ್ಲಿ ಅವರ ಐಕ್ಯೂ ಮಟ್ಟ ಮತ್ತು ಸೃಜನಶೀಲತೆ ಹೆಚ್ಚಿಸುತ್ತದೆ ಎಂದು ಉಲ್ಲೇಖಿಸಲಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮುತ್ತಾ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.