ಪರಧರ್ಮ ಸಹಿಷ್ಣುತೆಯೇ ಮಾನವೀಯತೆ: ಮೊಹಸಿನ್ ಬಾಬಾ

ನಗರದ

ಕಲಬುರಗಿ: ಮಾನವರೆಲ್ಲರೂ ಹುಟ್ಟುತ್ತಾ ಒಂದೆಯಾಗಿದ್ದು, ನಂತರ ಧರ್ಮ, ಜಾತಿ ಸಂಕೋಲೆಗಳಲ್ಲಿ ಸಿಲುಕಿ ಸಣ್ಣ ವ್ಯಕ್ತಿಯಾಗುತ್ತಿದ್ದಾರೆ. ಹುಟ್ಟಿದ ಧರ್ಮ, ಜಾತಿಗಳ ಆಧಾರದ ಮೇಲೆ ಮೇಲು-ಕೀಳು ಮಾಡದೆ ನಾವೆಲ್ಲರು ಒಂದೆ ಎಂಬ ಮನೋಭಾವನೆ ಮೈಗೂಡಿಸಿಕೊಳ್ಳಬೇಕು ಎಂದು ಇಸ್ಲಾಂ ಧಾರ್ಮಿಕ ಮುಖಂಡ, ಪೂಜ್ಯ ಸೈಯದ್ ಷಾ ಮಜರ್‌ಖಾದ್ರಿ ಅಲ್ಮಾರೋ ಮೊಹಸಿನ್ ಬಾಬಾ ಹೇಳಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಹಜರತ್ ಸೈಯದ್ ಷಾ ಹಸನ್‌ಖಾದ್ರಿ ದರ್ಗಾದ 40ನೇ ಉರುಸ್ ನಿಮಿತ್ಯ ಖಾದ್ರಿ ದರ್ಗಾ ಸಮಿತಿ ವತಿಯಿಂದ ಜರುಗಿದ ಗಂಧ ಲೇಪನ, ದೀಪೋತ್ಸವ, ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪದ ನಿಮಿತ್ಯ ಬುಧವಾರ ರಾತ್ರಿ ಏರ್ಪಡಿಲಾಗಿದ್ದ ಕೋಮು ಸಾಮರಸ್ಯ ಕಾರ್ಯಕ್ರಮ ಮತ್ತು ವಿವಿಧ ಧಾರ್ಮಿಕ ಮುಖಂಡರು, ಸಮಾಜ ಸೇವಕರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಧರ್ಮದಂತೆ ಮತ್ತೊಬ್ಬರ ಧರ್ಮ, ಭಾವನೆಗಳು, ಆಚರಣೆಗಳನ್ನು ಪರಸ್ಪರ ಗೌರವಿಸುವ ಪರಧರ್ಮ ಸಹಿಷ್ಣುತೆಯೇ ಮಾನವೀಯತೆಯಾಗಿದೆ ಎಂದರು.

ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ದೇವನೊಬ್ಬ, ನಾಮ ಹಲವು. ಜಾತಿ, ಧರ್ಮಗಳ ಆಧಾರದ ಮೇಲೆ ಕಲಹ, ಜಗಳವಾಡಿದರೆ ಯಾವುದೆ ಪ್ರಯೋಜನೆವಿಲ್ಲ. ಎಲ್ಲರೂ ಜೊತೆಗೂಡಿ ಸಾಗಬೇಕು. ಪ್ರತಿಯೊಬ್ಬರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಬೆಳೆಸಿಕೊಂಡು ಹೋಗಬೇಕು. ಎಲ್ಲಾ ಧರ್ಮಗಳ ತಿರುಳು ಒಂದೆಯಾಗಿದ್ದು, ಅದನ್ನು ಅರಿಯದೆ ಕಲಹಕ್ಕೆ ಆಸ್ಪದ ನೀಡಬಾರದು. ಎಲ್ಲರಲ್ಲಿ ಕೋಮು ಸಾಮರಸ್ಯ ಬೆಳೆಸಿಕೊಳ್ಳಬೇಕಾಗಿದೆ. ಪ್ರತಿ ವರ್ಷ ಉರುಸ್ ನಿಮಿತ್ಯ ವಿವಿಧ ಧರ್ಮಿಯರನ್ನು ಆಹ್ವಾನಿಸಿ, ಗೌರವಿಸುವ ಸಾಮರಸ್ಯ ವೃದ್ಧಿಯ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಇದರಿಂದ ಪರಸ್ಪರ ಸ್ನೇಹ, ಭ್ರಾತೃತ್ವಭಾವನೆ ಬೆಳೆಯಲು ಹಾಗೂ ಸಹ ಜೀವನ ಸಾಗಿಸಲು ಪೂರಕವಾಗುತ್ತದೆ ಎಂದರು.

ಆಳಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಶರಣಗೌಡ ಪಾಟೀಲ್ ಮಾತನಾಡಿ, ಈ ಭಾಗದಲ್ಲಿ ಖಾದ್ರಿ ದರ್ಗಾವು ಕೋಮು ಸಾಮರಸ್ಯ ಕೇಂದ್ರವಾಗಿದೆ. ಎಲ್ಲರು ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಹಜರತ್ ಸೈಯದ್ ಷಾ ಹಸನ್ ಖಾದ್ರಿ ಅವರು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿ ಒಬ್ಬ ವ್ಯಕ್ತಿ ತಪ್ಪು ಮಾಡಿದರೆ, ಇಡಿ ಸಮಾಜವನ್ನು ದೂಷಿಸುವುದು ಸಮಂಜಸವಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದರ್ಗಾದ ಪೂಜ್ಯ ಸಜ್ಜಾದ್ ನಸೀನ್ ಸೈಯದ್ ಷಾ ಮುರ್ತುಜಾ ಖಾದ್ರಿ ಅಲ್ಮಾರೋ ಸಂಜೀರಬಾಬಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸೈಯದ್ ಅಫನ್ ಖಾದ್ರಿ, ಸೈಯದ್ ಮೀರನ್ ಖಾದ್ರಿ, ಮೊಹಮ್ಮದ್ ಇಸಾಮೊದ್ದೀನ್ ಜುನೈದಿ, ಸೈಯದ್ ಸಲೀಮ್, ನವಾಬ ಖಾನ್, ಚಂದ್ರಕಾಂತ ಬಿರಾದಾರ, ದಿಲಿಪಕುಮಾರ ಚವ್ಹಾಣ, ಪ್ರಭುಲಿಂಗ ಮುಲಗೆ, ಶಿವಯೋಗೆಪ್ಪಾ ಎಸ್.ಬಿರಾದಾರ, ನಾಗೇಶ್ ತಿಮಾಜಿ ಬೆಳಮಗಿ, ಹಣಮಂತರಾಯ ದಿಂಡೂರೆ, ಅಸ್ಲಾಂ ಶೇಖ್, ಬಸವರಾಜ ಬೆಣ್ಣೆಶಿರೂರ್ ನೀಲೂರ್, ಪರಮೇಶ್ವರ ಹಳೆಜೋಳ, ಬಸವರಾಜ ಮಾಡ್ಯಾಳ್, ಸಿದ್ದಲಿಂಗ ದುರ್ಗೆ, ಮಾಳಪ್ಪ ಪೂಜಾರಿ, ವೀರಸಂಗಪ್ಪ ಬುಳ್ಳಾ, ಬಸವರಾಜ ಪಾಟೀಲ್ ಭುಸನೂರ್, ಪುರುಷೋತ್ತಮ, ಅಂಬರೀಷ್ ವೇದಿಕೆ ಮೇಲಿದ್ದರು.

ಉರುಸ್‌ನಲ್ಲಿ ನಗರ, ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ದೂರದ ರಾಜಸ್ಥಾನ ಮತ್ತು ಗುಜರಾತ ರಾಜ್ಯದ ಸಾವಿರಾರು ಜನ ಭಕ್ತಾದಿಗಳು ಪಾಲ್ಗೊಂಡಿದ್ದರು.

ದರ್ಗಾ ಸಮಿತಿ ವತಿಯಿಂದ ಆಗಮಿಸಿದ್ದ ಎಲ್ಲಾ ಭಕ್ತಾದಿಗಳಿಗೆ ಊಟ, ನೀರು, ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಸಾಂಪ್ರದಾಯಿಕ, ಧಾರ್ಮಿಕ, ಸಂಗೀತ ಕಾರ್ಯಕ್ರಮಗಳು ಜರುಗಿದವು. ದರ್ಗಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಾಡಲಾದ ವಿದ್ಯುತ್ ದೀಪಾಲಂಕಾರ ಮನಸೂರೆಗೊಳಿಸಿತು. ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು.

Leave a Reply

Your email address will not be published. Required fields are marked *