ಕಲಬುರಗಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿದ ದರೋಡೆಕೊರರು ಮಾಲೀಕನಿಗೆ ಮಾರಕಾಸ್ತ್ರಗಳನ್ನು ತೋರಿಸಿ 2 ರಿಂದ 3 ಕೆಜಿ ಚಿನ್ನಾಭರಣ ದೋಚಿರುವ ಘಟನೆ ಕಲಬುರಗಿ ನಗರದ ಸರಾಫ್ ಬಜಾರ್‌ನಲ್ಲಿ ನಡೆದಿದೆ.
ನಗರದಲ್ಲಿರುವ ಚಿನ್ನದ ಅಂಗಡಿಗೆ ಇಂದು ಮಧ್ಯಾಹ್ನ 12:30ರ ಸುಮಾರಿಗೆ 4 ಜನ ದರೋಡೆಕೋರರು ಗ್ರಾಹಕರ ಸೋಗಿನಲ್ಲಿ ನುಗ್ಗಿದ್ದರು. ಬಳಿಕ ಅಂಗಡಿ ಮಾಲೀಕ ಸಬಕಾ ಮಾಲೀಕ್ ಅವರಿಗೆ ಗನ್ ಹಾಗೂ ಮಾರಕಾಸ್ತ್ರ ತೋರಿಸಿ, ಆತನ ಕೈ ಕಾಲು ಕಟ್ಟಿ ಬಾಯಿಗೆ ಸೆಲ್ಲೊ ಟೆಪ್ ಸುತ್ತಿ ಎರಡುವರೆ ಕೆಜಿಗೂ ಅಧಿಕ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಬಳಿಕ ಅಂಗಡಿ ಮಾಲೀಕ ಶಟ್ಟರ್‌ಗೆ ಕಾಲಿನಿಂದ ಬಡಿದಿದ್ದಾರೆ. ಇದರಿಂದ ಅನುಮಾನಗೊಂಡು ಧಾವಿಸಿದ ಅಕ್ಕಪಕ್ಕದ ಅಂಗಡಿಯವರು ಮಾಲೀಕನನ್ನು ರಕ್ಷಿಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಂಗಡಿ ಮಾಲೀಕ ಸಬಕಾ ಮಾಲೀಕ್ ಅವರು ಈ ಹಿಂದೆ ಇದೆ ಅಂಗಡಿಯಲ್ಲಿ ಕೆಲಸ ಮಾಡಿದವರು ಭಾಗಿಯಾಗಿದ್ದಾರೆ ಎಂದು ಶಂಕಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಐದು ತಂಡಗಳನ್ನು ರಚಿಸಿ, ದರೋಡೆಕೋರರಿಗೆ ಬಲೆ ಬೀಸಿದ್ದಾರೆ.