ಕಲಬುರಗಿ: ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನಿಗೂ ಭೂಮಿಗೆ ನಂಟು. ಚಂದ್ರನಲ್ಲಿರುವ ವಾತಾವರಣ, ಅಲ್ಲಿನ ಮಾಹಿತಿಯ ಬಗ್ಗೆ ವ್ಯಾಪಕವಾಗಿ ಸಂಸೋಧನೆ ಜರುಗುತ್ತಿದ್ದು, ಈ ನಿಟ್ಟನಿಲ್ಲಿ ಭಾರತ ಇತ್ತೀಚಿಗೆ ಚಂದ್ರಯಾನ-3ರ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆ, ಶಿವಾ ವಿದ್ಯಾ ಮಂದಿರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಏರ್ಪಡಿಸಲಾಗಿದ್ದ ‘ವಿಶ್ವ ಚಂದ್ರ’ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾನವ ಪ್ರಥಮ ಬಾರಿಗೆ 1969ರ ಜುಲೈ-20 ರಂದು ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ದಿನವಾಗಿದೆ. ಅದರ ಸ್ಮರಣಾರ್ಥವಾಗಿ ‘ವಿಶ್ವ ಚಂದ್ರ ದಿನಾಚರಣೆ’ ಆಚರಿಸಲಾಗುತ್ತದೆ. ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಸೌರವ್ಯೂಹದ ರಚನೆಯಾದ ಸ್ವಲ್ಪ ಸಮಯದ ನಂತರದಲ್ಲಿ ಮಂಗಳದ ಗಾತ್ರದ ಬಂಡೆಯು ಭೂಮಿಗೆ ಡಿಕ್ಕಿ ಹೊಡೆದಾಗ ಚಂದ್ರನ ಉಗಮವಾಯಿತು. ಭೂಮಿಗೆ ಹೋಲಿಕೆ ಮಾಡಿದರೆ ಚಂದ್ರನು ಗಾತ್ರವು ಭೂಮಿಯ ನಾಲ್ಕನೇ ಒಂದರಷ್ಟಿದೆ. ಭೂಮಿಯ ಏಕೈಕ ಶಾಶ್ವತ ನೈಸರ್ಗಿಕ ಉಪಗ್ರಹವೆಂದರೆ ಅದುವೇ ಚಂದ್ರ. ಇದು ಸೌರವ್ಯೂಹದಲ್ಲಿ ಐದನೇ ಅತಿ ದೊಡ್ಡ ನೈಸರ್ಗಿಕ ಉಪಗ್ರಹ ಎನ್ನಲಾಗಿದೆ ಎಂದರು.
ರಾತ್ರಿಯ ಆಕಾಶಕ್ಕೆ ಹೋಲಿಕೆ ಮಾಡಿದರೆ ಚಂದ್ರನು ತುಂಬಾ ಬಿಳಿಯಾಗಿರುವಂತೆ ಕಾಣುತ್ತದೆ. ಆದರೆ ಚಂದ್ರನ ಮೇಲ್ಮೈ ತುಂಬಾ ಕಪ್ಪಾಗಿದೆ. ಚಂದ್ರನು ಭೂಮಿ ಎನ್ನುವ ಗ್ರಹದಿಂದ ಪ್ರತಿ ವರ್ಷ ಸುಮಾರು 3.8 ಸೆಂ.ಮೀ ದೂರ ಸಾಗುತ್ತಿದ್ದಾನೆ. ಚಂದ್ರನ ಮೇಲೆ ಭೂಕಂಪ ಸಂಭವಿಸುತ್ತವೆ. ಚಂದ್ರನ ಮೇಲೆ ರಾತ್ರಿಯ ವೇಳೆ ತಾಪಮಾನ -183 ಡಿಗ್ರಿ ಸೆಲ್ಸಿಯಸ್ ಮತ್ತು ಹಗಲಿನಲ್ಲಿ 106 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಹಗಲು ಮತ್ತು ರಾತ್ರಿ ನಡುವೆ ಚಂದ್ರನ ತಾಪಮಾನದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ ಎಂದು ಚಂದ್ರನ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕಿಯರಾದ ಪ್ರಿಯಾಂಕಾ ಪಾಟೀಲ್, ಖಮರುನ್ನೀಸ್ ಬೇಗಂ, ಪ್ರೀತಿ, ಪ್ರಿಯಾಂಕಾ, ಚಂದ್ರಲೇಖಾ, ಸರಸ್ವತಿ, ಶಿಲ್ಪಾ, ವರ್ಷಾರಾಣಿ, ಸೇವಕಿ ನಾಗಮ್ಮ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.