ಕಲಬುರಗಿ: ಕಥೆ, ಕಾದಂಬರಿ, ನಾಟಕ, ಸಂಪಾದನೆ ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯ ಕೃಷಿ ಮಾಡುವ ಮೂಲಕ ತ.ರಾ ಸುಬ್ಬರಾವ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೆಯಾದ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ತ.ರಾ ಸುಬ್ಬರಾವ್‌ರ 105ನೇ ಜನ್ಮದಿನೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ತರಾಸು ಅವರು ದೊಡ್ಡ ಪ್ರಮಾಣದಲ್ಲಿ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಪ್ರಗತಿಪರ ಚಿಂತಕರಾದ ತರಾಸು ಅವರು ಪತ್ರಿಕಾರಂಗದಲ್ಲಿಯೂ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ. ಸಾಹಿತಿಗಳಾಗಿ, ವಾಗ್ಮಿಗಳಾಗಿ ಜನಪ್ರೀಯರಾಗಿದ್ದ ಅವರು, 61 ಗ್ರಂಥಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಬಸವರಾಜ ಮಳ್ಳಿ, ಲೇಖಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ಸೋನಿಯಾ ಸರಡಗಿ ಹಾಗೂ ವಿದ್ಯಾರ್ಥಿಗಳು ಇದ್ದರು.