ಯುವಕರು ಕೃಷಿಯತ್ತ ಮುಖ ಮಾಡಲಿ

ಜಿಲ್ಲೆ

ಕಲಬುರಗಿ: ಯುವಕರು ದೇಶದ ಅಮೂಲ್ಯ ಆಸ್ತಿ, ಕೃಷಿ ದೇಶದ ಬೆನ್ನೆಲಬು, ಸರ್ಕಾರ ಎಲ್ಲರಿಗೂ ನೌಕರಿ ನೀಡಲು ಸಾಧ್ಯವಿಲ್ಲ ಹೀಗಾಗಿ ಯುವಕರು ಕೃಷಿ ಕ್ಷೇತ್ರದಲ್ಲಿ ಆಸಕ್ತಿಯಿಂದ ದುಡಿಮೆ ಮಾಡಿದರೆ, ಹೆಚ್ಚಿನ ಇಳುವರಿ ಪಡೆದು ಉತ್ತಮ ಲಾಭ ಪಡೆಯಲು ಸಾಧ್ಯವಿದೆ. ಆದ್ದರಿಂದ ಯುವಕರು ಕೃಷಿಯತ್ತ ಮುಖ ಮಾಡಬೇಕಾಗಿದೆ ಎಂದು ಪ್ರಗತಿಪರ, ಸಾಧಕ ರೈತ ಚನ್ನವೀರಯ್ಯ ಕುಂಬಾರಮಠ ಹೇಳಿದರು.

ಆಳಂದ ತಾಲೂಕಿನ ನರೋಣಾ ಗ್ರಾಮದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ 3 ಎಕರೆಯಲ್ಲಿ 25 ಕ್ವಿಂಟಲ್ ತೊಗರಿ ಬೆಳೆದಿದ್ದೆನೆ. 16 ಎಕೆರೆ ಭೂಮಿಯಲ್ಲಿ ತೊಗರಿ, ಸೋಯಾ, ಹೆಸರು, ಜೋಳ, ಕಡಲಿ, ಸಾಸಿವೆ, ಕುಸಬಿ, ಗೋಧಿ ಮಿಶ್ರ ಬೆಳೆ ಪದ್ದತಿ ಅನುಸರಿಸಿ, ಲಕ್ಷಾಂತರ ರೂ. ಆದಾಯ ಪಡೆದಿದ್ದೆನೆ. ಎರಡು ಕೊಳವೆ ಭಾವಿಯ ಸಹಾಯದಿಂದ ನೀರಾವರಿ ಮಾಡಿದ್ದೆನೆ. ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲಾಗಿದೆ. ಕಳೆದ 18 ವರ್ಷಗಳಿಂದ ನಾನು ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆನೆ. ತರಕಾರಿ ಹಾಗೂ ಇತರೆ ಬೆಳೆಗಳಿಗೆ ಔಷಧಿ ಮತ್ತು ರಾಸಾಯನಿಕ ಗೊಬ್ಬರ ಬಳಸದೆ, ಸಾವಯುವ ಗೊಬ್ಬರ ಬಳಸಿದ್ದೆನೆ. ಕೃಷಿ ಇಲಾಖೆ ಹಾಗೂ ಕೆಲವು ಸಂಘ-ಸಂಸ್ಥೆಗಳು ನನ್ನನ್ನು ಪ್ರೋತ್ಸಾಹಿಸಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಗ್ರಾಮಸ್ಥ ಚಂದ್ರಕಾಂತ ಸಾವಳಗಿ, ಸಮಾಜ ಸೇವಕ ದಿಲಿಪ ಕಿರಸಾವಳಗಿ, ಶಂಕರ ಸ್ವಾಮಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *