ಸರಣಿ ಕಳ್ಳತನ ಪ್ರಕರಣದ ಆರೋಪಿಯ ಬಂಧನ: 4.40 ಲಕ್ಷ ರೂ. ಮೌಲ್ಯದ ನಗ-ನಗದು ವಶ

ಜಿಲ್ಲೆ

ಕಲಬುರಗಿ: ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 11 ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.

ಗುರುವಾರ ಜಿಲ್ಲಾ ಪೊಲೀಸ್ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಝಾಮ ಗೇಟ್ ವಾಡಿ ನಿವಾಸಿ ಶೇಖ್ ಪಾಶ ಬಂಧಿತ ಆರೋಪಿ. ಈತನಿಂದ 4,40,400 ರೂ. ಮೌಲ್ಯದ ಬೆಳ್ಳಿ-ಚಿನ್ನದ ಆಭರಣಗಳು ಹಾಗೂ ನಗದು ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಹಿಂದೆ ಇದೆ ಪ್ರಕರಣದಲ್ಲಿ ನಾಲವಾರ ನಿವಾಸಿಗಳಾದ ಸಿದ್ದೀಕ್ ಮತ್ತು ಉಬೇದ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಶೇಖ್ ಪಾಶ ಕಳೆದ 11 ತಿಂಗಳಿಂದ ಮಹಾರಾಷ್ಟ್ರದ ಪುನಾ, ಬಾಂಬೆ ಸೇರಿದಂತೆ ಮತ್ತಿತರ ನಗರಗಳಲ್ಲಿ ತನ್ನ ವಾಸ ಸ್ಥಳವನ್ನು ಬದಲಾಯಿಸುತ್ತಾ ತಲೆಮರೆಸಿಕೊಂಡಿದ್ದ. ಈತನನ್ನು ಬಂಧಿಸಲು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಕೊನೆಗೆ ಆರೋಪಿ ವಶಕ್ಕೆ ಪಡೆದು ಕಳ್ಳತನವಾಗಿದ್ದ 4,40,400 ರೂ. ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಜಪ್ತಿ ಮಾಡುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ್ ತಿಗಡಿ, ಪಿಎಸ್‌ಐಗಳಾದ ಶ್ರೀಶೈಲ ಅಂಬಾಟಿ, ಚಂದ್ರಮಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *